ಉತ್ತರಪ್ರದೇಶ: ನದಿ ತೀರದಲ್ಲಿ ಹೂತು ಹಾಕಿದ್ದ 300ಕ್ಕೂ ಹೆಚ್ಚು ಮೃತದೇಹಗಳು ಮಳೆಯಿಂದಾಗಿ ಪತ್ತೆ

Update: 2021-05-15 11:39 GMT

ಲಕ್ನೋ: ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯು ದೇಶದಾದ್ಯಂತ ದುರಂತದ ಸರಮಾಲೆಯನ್ನೇ ಹಬ್ಬಿಸಿದೆ. ಅದರಲ್ಲೂ ಅತಿ ಹೆಚ್ಚು ಜನಸಂಖ್ಯೆಯಿರುವ ರಾಜ್ಯ ಉತ್ತರಪ್ರದೇಶದಲ್ಲಿ ಕೋವಿಡ್‌ ಪರಿಣಾಮವು ಭೀಕರವಾಗಿದೆ. ನೆರೆಯ ಪೂರ್ವ ಯುಪಿಯಿಂದ ಬಂದಿದ್ದ ಶಂಕಿತ ಕೋವಿಡ್‌ ಸಂತ್ರಸ್ತರ ಕನಿಷ್ಠ ೭೧ ಮೃತದೇಹಗಳನ್ನು ಚೌಸಾ ಗ್ರಾಮದ ಗಂಗಾ ನದಿಯ ತೀರದಲ್ಲಿ ಹೂಳಲಾದ ಕುರಿತು ಅಲ್ಲಿನ ಜಿಲ್ಲಾಡಳಿತ ಹೇಳಿಕೆ ನೀಡಿತ್ತು. 

ಆದರೆ ಈ ಕುರಿತು ಬಳಿಕ ವರದಿ ಮಾಡಿದ್ದ ಪತ್ರಿಕೆಗಳು ಆ ಪ್ರದೇಶದಲ್ಲಿ ೨೦೦೦ಕ್ಕೂ ಹೆಚ್ಚು ಮೃತದೇಹಗಳನ್ನು ಹೂಳಲಾಗಿದೆ ಎಂದು ಮತ್ತು ತರಾತುರಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ತಿಳಿಸಿದೆ.

ಸಾಂಕ್ರಾಮಿಕ ರೋಗವು ಹೆಚ್ಚು ಪರಿಣಾಮ ಬೀರಿರುವ ಗಾಝಿಯಾಬಾದ್‌, ಕಾನ್ಪುರ್‌, ಉನ್ನಾವೋ, ಗಾಝಿಪುರ, ಕನೌಜ್‌ ಮತ್ತು ಬಲ್ಲಿಯಾ ಪ್ರದೇಶಗಳಲ್ಲಿ ಇಂತಹದೇ ಪ್ರಕರಣಗಳು ವರದಿಯಾಗಿವೆ. ಹಿಂದಿ ದಿನ ಪತ್ರಿಕೆ ದೈನಿಕ್‌ ಭಾಸ್ಕರ್‌ ಪ್ರಕಾರ, ಕಳೆದ ವಾರ ಉನ್ನಾವೋದಲ್ಲಿ ಮಾತ್ರ 900 ಮೃತದೇಹಗಳನ್ನು ನದಿಯ ಉದ್ದಕ್ಕೂ ಹೂಳಲಾಗಿತ್ತು ಎಂದು ವರದಿಯಾಗಿದೆ.

ಇನ್ನು ಕನೌಜ್‌ ನಲ್ಲಿ 350, ಕಾನ್ಪುರದಲ್ಲಿ 400, ಗಾಝಿಪುರದಲ್ಲಿ 280 ಮೃತದೇಹಗಳನ್ನು ಹೂಳಲಾಗಿದೆ ಎಂದು thewire.in ವರದಿ ಮಾಡಿದೆ.

ಈ ಕುರಿತಾದಂತೆ indianexpress ಕೆಲವು ಕುಟುಂಬಗಳನ್ನು ಸಂದರ್ಶಿಸಿದಾಗ, ನಮಗೆ ಸಮರ್ಪಕವಾದ ಹಣಕಾಸಿನ ಸಂಪನ್ಮೂಲ ಇರಲಿಲ್ಲ ಮತ್ತು ಗೌರವಯುತ ಅಂತ್ಯಸಂಸ್ಕಾರ ಮಾಡಲು ನಾವು ಕಳಂಕಿತರಾಗಿದ್ದೇವೆ" ಎಂದು ಅವರು ಹೇಳಿಕೆ ನೀಡಿದ್ದಾಗಿ ತಿಳಿಸಿದೆ.

ಉನ್ನಾವೋದಲ್ಲಿ ಭಾರೀ ಮಳೆಯಾದ ಬಳಿಕ ಗಂಗಾ ನದಿಯುದ್ದಕ್ಕೂ ಮರಳು ಸರಿದಿದ್ದು, ಈ ವೇಳೆ 200ಕ್ಕೂ ಹೆಚ್ಚು ಮೃತದೇಹಗಳು ಕಂಡು ಬಂದಿವೆ. ಅನೇಕ ಮೃತದೇಹಗಳು ನದಿಯ ದಡದಲ್ಲಿ ಬಿದ್ದಿದ್ದು, ಇನ್ನು ಕೆಲವು ನದಿಯಲ್ಲಿ ತೇಲುತ್ತಿವೆ ಎಂದು ತಿಳಿದು ಬಂದಿದೆ.

"ಇದು ನಾವು ಹಿಂದೆಂದೂ ನೋಡದ ದೃಶ್ಯವಾಗಿದೆ. ದೇಹಗಳನ್ನು ದಡಕ್ಕೆ ಎಳೆಯಲು ನಾವು ದೋಣಿಗಳನ್ನು ಬಳಸುತ್ತಿದ್ದೇವೆ. ಸುತ್ತಲೂ ದುರ್ಗಂಧ ತುಂಬಿದೆ. ಗಂಗಾ ನದಿಯು ಇಲ್ಲಿ ತನ್ನ ಪಥ ಬದಲಾಯಿಸುವ ಕಾರಣ ಇಲ್ಲೇ ಶವಗಳು ಸಿಕ್ಕಿಕೊಳ್ಳುತ್ತದೆ ಎಂದು ಶವಂಸ್ಕಾರದ ಕಾರ್ಯ ನಿರ್ವಹಿಸುತ್ತಿರುವ ಕಮಲಾದೇವಿ ಹೇಳಿದ್ದಾರೆಂದು ವರದಿ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಉನ್ನಾವೋ,ಬಲ್ಲಿಯಾ ಮತ್ತು ಗಾಝಿಪುರ ಪ್ರದೇಶಗಳಲ್ಲಿ ನೂರಾರು ಆಳವಿರದ ಸಮಾಧಿಗಳು ಪತ್ತೆಯಾಗಿದ್ದಾಗಿ hindustantimes ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News