ಹರಿದ್ವಾರದಲ್ಲಿಯ ತನ್ನ ಕೋವಿಡ್ ಆಸ್ಪತ್ರೆಯ ಬಗ್ಗೆ ಬೊಗಳೆ ಬಿಡುತ್ತಿರುವ ಬಾಬಾ ರಾಮದೇವ್!

Update: 2021-05-15 12:01 GMT

‌ಡೆಹ್ರಾಡೂನ್,ಮೇ 12: ತನ್ನ ಪತಂಜಲಿ ಆಯುರ್ವೇದ ಸಂಸ್ಥೆಯು ಉತ್ತರಾಖಂಡ ಸರಕಾರದ ಸಹಭಾಗಿತ್ವದೊಂದಿಗೆ ಹರಿದ್ವಾರದಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಗಾಗಿ ಸ್ಥಾಪಿಸಿರುವ ಆಸ್ಪತ್ರೆಯು ಗಂಭೀರ ಸ್ಥಿತಿಯಲ್ಲಿರುವವರಿಗಾಗಿ ಐಸಿಯುಗಳು ಮತ್ತು ವೆಂಟಿಲೇಟರ್ಗಳೊಂದಿಗೆ ಸುಸಜ್ಜಿತವಾಗಿದೆ ಎಂದು ಬಾಬಾ ರಾಮದೇವ ಸುದ್ದಿವಾಹಿನಿಗಳಲ್ಲಿ ಕೊಚ್ಚಿಕೊಳ್ಳುತ್ತಿದ್ದಾರೆ. Newslaundry ಸುದ್ದಿ ಜಾಲತಾಣದ ವರದಿಗಾರರ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ರಾಮದೇವ ಬೊಗಳೆ ಬಿಡುತ್ತಿದ್ದಾರೆ ಎನ್ನುವುದು ಬಯಲಾಗಿದೆ. ಈ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿಗಳಿಲ್ಲ. ಐಸಿಯು ವಾರ್ಡ್ ಮತ್ತು ವೆಂಟಿಲೇಟರ್ಗಳು ಕಾರ್ಯಾಚರಿಸುತ್ತಿಲ್ಲ. ರಾಮದೇವರ ಮಾತನ್ನು ನಂಬಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರೆ ಅವರನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಲಾಗುತ್ತಿದೆ. ಗಮನಾರ್ಹವೆಂದರೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ಕೆಲವರು ಅಲ್ಲಿಯ ಚಿಕಿತ್ಸಾ ವೈಖರಿಯನ್ನು ಕಂಡು ತಾವಾಗಿಯೇ ಬಿಡುಗಡೆಗೊಂಡು ಬೇರೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿವರವಾದ ವರದಿಯನ್ನು Newslaundry   ಪ್ರಕಟಿಸಿದೆ.

 


ಕುಂಭಮೇಳ ಯಾತ್ರಿಗಳಿಗಾಗಿ ಸ್ಥಾಪಿಸಲಾಗಿದ್ದ ಆಸ್ಪತ್ರೆಯನ್ನೇ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ರಾಮದೇವ್ ಅವರ ಹೇಳಿಕೆಗಳು ಸಂಪೂರ್ಣ ಸುಳ್ಳಾಗಿದ್ದು,ಜನರನ್ನು ದಾರಿ ತಪ್ಪಿಸುತ್ತಿವೆ. ಮೇ 10ರಂದು ವರದಿಗಾರರ ತಂಡವು ಅಲ್ಲಿಗೆ ಭೇಟಿ ನೀಡಿದ್ದಾಗ 150 ಹಾಸಿಗೆಗಳ ಪೈಕಿ ಕೇವಲ 50 ಹಾಸಿಗೆಗಳು ಮಾತ್ರ ಕಾರ್ಯಾಚರಿಸುವ ಸ್ಥಿತಿಯಲ್ಲಿದ್ದವು ಮತ್ತು ಐಸಿಯು ಹಾಸಿಗೆ ಇರಲೇ ಇಲ್ಲ. ಅಲ್ಲಿ ವೆಂಟಿಲೇಟರ್ಗಳು ಇವೆಯಾದರೂ ಒಂದೂ ಕಾರ್ಯ ಮಾಡುವ ಸ್ಥಿತಿಯಲ್ಲಿಲ್ಲ. ವೈದ್ಯರು,ವಾರ್ಡ್ಬಾಯ್ಗಳು ಮತ್ತು ಸ್ವಚ್ಛತಾ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಈ ಆಸ್ಪತ್ರೆಯು ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸುವ ಸ್ಥಿತಿಯಲ್ಲಿಲ್ಲ ಮತ್ತು ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸಾಗಹಾಕುವುದು ವೈದ್ಯರಿಗೆ ಅನಿವಾರ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆಸ್ಪತ್ರೆಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಮತ್ತು ಕೋವಿಡ್ ವಾರ್ಡ್ಗಳಿಗೆ ಛಾವಣಿಗಳೇ ಇಲ್ಲದಿರುವುದು ಸೋಂಕು ವ್ಯಾಪಕವಾಗಿ ಹರಡುವ ಅಪಾಯವನ್ನು ಸೃಷ್ಟಿಸಿದೆ. ಮೇ 3ರಂದು ಉತ್ತರಾಖಂಡದ ಮುಖ್ಯಮಂತ್ರಿ ತೀರ್ಥಸಿಂಗ್ ರಾವತ್ ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಮೇ 4ರಂದು ಎಬಿಪಿ ನ್ಯೂಸ್ಗೆ ನೀಡಿದ್ದ ಸಂದರ್ಶನದಲ್ಲಿ ರಾಮದೇವ ಆಸ್ಪತ್ರೆಯಲ್ಲಿನ ಎಲ್ಲ 150 ಹಾಸಿಗೆಗಳು ಆಮ್ಲಜನಕ ಸೌಲಭ್ಯವನ್ನು ಹೊಂದಿವೆ ಎಂದು ಹೇಳಿಕೊಂಡಿದ್ದರು. ಇದು ಅಪ್ಪಟ ಸುಳ್ಳಾಗಿದೆ. ಇವೆಲ್ಲ ಸುದ್ದಿವಾಹಿನಿಗಳಿಗೆ ತಿಳಿದಿದ್ದರೂ ರಾಮದೇವ ತನ್ನ ಆಸ್ಪತ್ರೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಅವಕಾಶ ನೀಡುತ್ತಿವೆ,ಏಕೆಂದರೆ ರಾಮದೇವ ಅವರ ಪತಂಜಲಿ ಸಂಸ್ಥೆಯು ಟಿವಿ ಸುದ್ದಿವಾಹಿನಿಗಳಿಗೆ ಅತ್ಯಂತ ಹೆಚ್ಚಿನ ಜಾಹೀರಾತುಗಳನ್ನು ನೀಡುವ ಕಂಪನಿಗಳಲ್ಲಿ ಒಂದಾಗಿದೆ ಎಂದು ವರದಿ ಬೆಟ್ಟು ಮಾಡಿದೆ.

ಟಿವಿ ಸಂದರ್ಶನಗಳಲ್ಲಿ ರಾಮದೇವ್ ಈ ಆಸ್ಪತ್ರೆಯು ಅಲೋಪತಿ,ಆಯುರ್ವೇದ ಮತ್ತು ಯೋಗಗಳ ಮಿಶ್ರಣವಾಗಿರುವ ‘ಸರ್ವಾಂಗೀಣ’ ಚಿಕಿತ್ಸೆಯನ್ನು ಕೋವಿಡ್ ರೋಗಿಗಳಿಗೆ ನೀಡುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಪತಂಜಲಿಯ,ಸೂಕ್ತ ಪರೀಕ್ಷೆಗೆ ಒಳಗಾಗದ ಕೊರೊನಿಲ್ ಮಾತ್ರೆಯನ್ನು ರೋಗಿಗಳಿಗೆ ನೀಡಲಾಗುತ್ತಿದ್ದು,ರಾಮದೇವ್ ಹೇಳುವಂತೆ ಆಯುರ್ವೇದ ಮತ್ತು ಅಲೋಪತಿಯ ಕಲಸುಮೇಲೋಗರದ ಚಿಕಿತ್ಸೆ ಖಂಡಿತಕ್ಕೂ ‘ಸರ್ವಾಂಗೀಣ ’ವಲ್ಲ.

‘150 ಹಾಸಿಗೆಗಳ ಪೈಕಿ ಕೇವಲ 50 ಹಾಸಿಗೆಗಳು ಆಮ್ಲಜನಕ ಸೌಲಭ್ಯವನ್ನು ಹೊಂದಿವೆ. 10 ವೆಂಟಿಲೇಟರ್ಗಳು ಲಭ್ಯವಿವೆಯಾದೂ ಸಿಬ್ಬಂದಿಗಳ ಕೊರತೆಯಿಂದಾಗಿ ಅವು ನಿರುಪಯುಕ್ತವಾಗಿವೆ. ದಿನದ 24 ಗಂಟೆಯೂ ರೋಗಿಗಳನ್ನು ನೋಡಿಕೊಳ್ಳಲು ನಮ್ಮಲ್ಲಿ ಸಿಬ್ಬಂದಿಗಳಿಲ್ಲ,ವಿಶೇಷವಾಗಿ ಅಲೋಪತಿ ವೈದ್ಯರ ತೀವ್ರ ಕೊರತೆಯಿದೆ. ಆಯುರ್ವೇದ ಕಾಲೇಜುಗಳಿಂದ ಕರೆಸಿಕೊಂಡಿರುವ ತರಬೇತಿ ವೈದ್ಯರಿದ್ದರೂ ಅಲೋಪತಿ ಚಿಕಿತ್ಸೆಗೆ ಅವರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಕೆ.ಸೋನಿ ತಿಳಿಸಿದರು.

‘ಒಂದು ತುರ್ತು ಸಂದರ್ಭ ವಾರ್ಡ್ ಮತ್ತು ಮೂರು ಸಾಮಾನ್ಯ ವಾರ್ಡ್ಗಳಿವೆ. ಪ್ರತಿ ಪಾಳಿಗೆ ಕನಿಷ್ಠ 10 ಅಲೋಪತಿ ವೈದ್ಯರ ಅಗತ್ಯವಿದೆ,ಆದರೆ ಒಬ್ಬರು ಅಥವಾ ಇಬ್ಬರು ವೈದ್ಯರಿಂದ ನಾವು ಕೆಲಸ ಮಾಡಿಸುವಂತಾಗಿದೆ. 130 ವಾರ್ಡ್ಬಾಯ್ಗಳ ಅಗತ್ಯವಿದ್ದರೆ ಇಲ್ಲಿರುವುದು 90 ವಾರ್ಡ್‌ ಬಾಯ್‌ ಗಳು ಮಾತ್ರ’ ಎಂದು ಸಿಬ್ಬಂದಿಗಳ ಉಸ್ತುವಾರಿ ನೋಡಿಕೊಳ್ಳುತಿರುವ ಅಧಿಕಾರಿಯೋರ್ವರು ತಿಳಿಸಿದರು.

ಆಸ್ಪತ್ರೆಗೆ ನಿಯೋಜಿಸಲಾಗಿದ್ದ ಇಬ್ಬರು ಅರಿವಳಿಕೆ ತಜ್ಞರು ಗೈರುಹಾಜರಾಗಿದ್ದಾರೆ. ಐಸಿಯು ತಂತ್ರಜ್ಞರು ಕೂಡ ಲಭ್ಯವಾಗುತ್ತಿಲ್ಲ ಎಂದು ದೂರಿಕೊಂಡು ಡಾ.ಖನ್ನಾ ಹರಿದ್ವಾರದ ವಿಭಾಗಾಧಿಕಾರಿ ಮತ್ತು ಮುಖ್ಯ ವೈದ್ಯಾಧಿಕಾರಿಗೆ ಪತ್ರವನ್ನೂ ಬರೆದಿದ್ದಾರೆ. ಈ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಲ್ಲ,ಹೀಗಾಗಿ ಟಾಯ್ಲೆಟ್ಗಳು ಕೊಳೆತು ನಾರುತ್ತಿವೆ. ಕ್ಷ-ಕಿರಣ ಯಂತ್ರವಿದೆಯಾದರೂ ಅದನ್ನು ನಿರ್ವಹಿಸಲು ತಂತ್ರಜ್ಞರಿಲ್ಲ. ನುರಿತ ಸಿಬ್ಬಂದಿಗಳ ಕೊರತೆ,ಕಾರ್ಯಾಚರಿಸದ ಐಸಿಯು ವಾರ್ಡ್ಗಳು ಮತ್ತು ವೆಂಟಿಲೇಟರ್ಗಳಿಂದಾಗಿ ಆಮ್ಲಜನಕದ ಮಟ್ಟ 70ಕ್ಕಿಂತ ಕಡಿಮೆಯಿರುವ ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಡಾ.ಸೋನಿ ತಿಳಿಸಿದರು. 

ಸದ್ಯ ಇಲ್ಲಿ 30ರಿಂದ 40 ಕೋವಿಡ್ ರೋಗಿಗಳಿಗೆ ಅಲೋಪತಿ ಮತ್ತು ಆಯರ್ವೇದದ ಕಲಬೆರಕೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮೇ 4ರಿಂದ ಮೇ 7ರ ನಡುವಿನ ಅವಧಿಯಲ್ಲಿ ಕನಿಷ್ಠ ಐವರು ಕೋವಿಡ್ ರೋಗಿಗಳು ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ಸ್ಥಿತಿಯ ಬಗ್ಗೆ ಸುದ್ದಿ ಜಾಲತಾಣವು ಕೇಳಿದ್ದ ಪ್ರಶ್ನೆಗಳಿಗೆ ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಶಂಭು ಝಾ ಅವರು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News