×
Ad

ಎಲ್ಲರಿಗೂ ಉಚಿತ ಲಸಿಕೆ ವಿತರಿಸಲು ಆಗ್ರಹಿಸಿ ಜನಾಂದೋಲನ: ಐವನ್ ಡಿಸೋಜ

Update: 2021-05-15 18:05 IST

ಮಂಗಳೂರು, ಮೇ 15: ದೇಶದ 130 ಕೋಟಿ ಜನರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಎಲ್ಲರಿಗೂ ಲಸಿಕೆ ನೀಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಇದು ಕೇಂದ್ರ ಸರಕಾರದ ವೈಫಲ್ಯವನ್ನು ಎತ್ತಿತೋರಿಸುತ್ತಿದೆ. ಕೊರೋನ ಸೋಂಕು ನಿಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಮಾಜಿ ವಿಧಾನ ಪರಿಷತ್ ಸದಸ್ಯ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಉಚಿತ ಲಸಿಕೆ ವಿತರಿಸಬೇಕು ಎಂದು ಆಗ್ರಹಿಸಿ ಜನಾಂದೋಲನ ಮಾಡುವುದಾಗಿ ಘೋಷಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಮಾಂಡ್ ಫ್ರೀ ವ್ಯಾಕ್ಸಿನೇಷನ್ ಫಾರ್ ಆಲ್, ಇಂಡಿಯನ್ಸ್ ನೀಡ್ ಫ್ರೀ ವ್ಯಾಕ್ಸಿನೇಷನ್, ನಾಟ್ ವಿಸ್ತ (We demand free vaccination for all, Indians need free Vaccination, not Vista) ಎಂಬ ಜನಾಂದೋಲನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭಿಸಲಾಗುವುದು. 45 ವಯಸ್ಸಿನ ಮೇಲಿನವರಿಗೆ 1 ವಾರದಲ್ಲಿ, 18ರಿಂದ 44ನೇ ವಯಸ್ಸಿನವರಿಗೆ 2ನೇ ವಾರದಲ್ಲಿ, 12 ರಿಂದ 18ನೇ ವಯಸ್ಸಿನವರಿಗೆ 3ನೇ ವಾರದಲ್ಲಿ ವ್ಯಾಕ್ಸಿನ್ ನೀಡಬೇಕು. ದೇಶದ 130 ಕೋಟಿ ಜನರಲ್ಲಿ ಎಲ್ಲರಿಗೂ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮನೆ ಮನೆಗೆ ತೆರಳಿ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರೂ ಕ್ರಮ ಜರುಗಿಸಿಲ್ಲ. ಬದಲಾಗಿ ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳುವ ಮೂಲಕ ನ್ಯಾಯಾಂಗವನ್ನೇ ಬಿಜೆಪಿಗರು ಅಣಕಿಸುತ್ತಿರುವುದು ವಿಪರ್ಯಾಸವಾಗಿದೆ. ದೇಶದಲ್ಲಿ 3,000 ಕ್ಕಿಂತಲೂ ಅಧಿಕ ಲಸಿಕೆ ತಯಾರು ಮಾಡುವ ಕಂಪೆನಿಗಳಿವೆ. ಈ ಕಂಪೆನಿಗಳಿಗೆ ದೇಶದ ಆಡಳಿತವು ‘ಸಂಶೋಧನೆ ಮಾಡಿ ಲಸಿಕೆಯನ್ನು ತಯಾರು ಮಾಡುವಂತೆ’ ಎಂದೂ ಕೇಳಿಕೊಂಡ ಉದಾಹರಣೆ ಇಲ್ಲ. ಇದು ಕೊರೋನ ನಿಗ್ರಹದಲ್ಲಿ ಸರಕಾರಕ್ಕಿರುವ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದರು.

ರಾಜ್ಯದಲ್ಲಿ ಕೊರೋನ ನಿಗ್ರಹಕ್ಕೆ ಸಂಪೂರ್ಣ ಲಾಕ್‌ಡೌನ್ ಮಾಡಬೇಕಿದೆ. ಕಳೆದೊಂದು ತಿಂಗಳಿನಿಂದ ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ. ಇದರಿಂದ ಅವರ ಕುಟುಂಬ ಸಂಕಷ್ಟದಲ್ಲಿದೆ. ಹಾಗಾಗಿ ಸರಕಾರ ಅವರಿಗೆ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಬೇಕು ಎಂದ ಐವನ್ ಡಿಸೋಜ ವಿದ್ಯುತ್ ಬಿಲ್ಲು ಮತ್ತು ಸಾಲದ ಕಂತುಗಳ ಬಡ್ಡಿಯನ್ನು ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಅಖಿಲ ಭಾರತ ಸಾಮಾಜಿಕ ಜಾಲತಾಣದ ಸಂಯೋಜಕಿ ಶೆರಿಲ್ ಶೆರಿನ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಕೇಶವ, ಜೆಸಿಂತಾ ವಿಜಯಾ ಅಲ್ಫ್ರೆಡ್, ಮಾಜಿ ಕಾರ್ಪರೇಟರ್‌ಗಳಾದ ಭಾಸ್ಕರ್ ರಾವ್, ಮುಹಮ್ಮದ್ ಕುಂಜತ್ತ್‌ಬೈಲ್, ಕಾಂಗ್ರೆಸ್ ನಾಯಕರುಗಳಾದ ವಿವೇಕ್‌ರಾಜ್ ಪೂಜಾರಿ, ಅಶಿತ್ ಪಿರೇರಾ, ಚಿತ್ತರಂಜನ್ ಶೆಟ್ಟಿ, ಶೋಭಾ ಕೇಶವ, ಪ್ರವೀಣ್ ಜೇಮ್ಸ್, ಹೊನ್ನಯ್ಯ, ಸತೀಶ್ ಪೆಂಗಳ್, ಆನಂದ್ ಸೋನ್ಸ್, ನಝೀರ್ ಬಜಾಲ್, ಹಬೀಬುಲ್ಲ ಕಣ್ಣೂರು, ಸಲೀಂ ಮುಕ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News