ಇಸ್ರೇಲ್ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ
ಮಂಗಳೂರು, ಮೇ 15: ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಮಾನುಷ ಕೃತ್ಯದ ವಿರುದ್ಧ ಸುನ್ನಿ ಯುವಜನ ಸಂಘದ ಕೇಂದ್ರ ಸಮಿತಿಯ ಕರೆಯಂತೆ ದ.ಕ.ಜಿಲ್ಲೆಯ ಸಾವಿರಾರು ಕಾರ್ಯಕರ್ತರ ಮನೆಗಳಲ್ಲಿ ಪ್ರತಿಭಟನೆಯ ಜ್ವಾಲೆಯು ಶನಿವಾರ ಬೆಳಗ್ಗೆ ಏಕಕಾಲದಲ್ಲಿ ನಡೆಯಿತು.
ಇಸ್ರೇಲ್ ಕ್ರೂರತೆ ನಿಲ್ಲಿಸಲಿ, ಪ್ಯಾಲೆಸ್ತೀನ್ ಜೊತೆ ನಿಲ್ಲುವೆವು, ನಮ್ಮನ್ನು ಕೊಲ್ಲಬೇಡಿ, ನಾವು ಗೆಲ್ಲುವೆವು ಮುಂತಾದ ಭಿತ್ತಿಪತ್ರವನ್ನು ಪ್ರದರ್ಶಿಸಿ ಪ್ರತಿಭಟಿಸಲಾಯಿತು. ಜಾಗತಿಕವಾಗಿ ಅನ್ಯಾಯದ ವಿರುದ್ಧ ಜನ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ಜಗತ್ತಿನ ಗಮನವನ್ನು ಇಸ್ರೇಲ್ ವಿರುದ್ಧ ತಿರುಗುವಂತೆ ಮಾಡಿ ಅನ್ಯಾಯಕ್ಕೊಳಗಾದ ಪ್ಯಾಲೆಸ್ತೀನ್ ಜನತೆಗೆ ಶಾಶ್ವತ ಪರಿಹಾರ ದೊರಕಬೇಕೆಂಬ ಉದ್ದೇಶದಿಂದ ಈ ಪ್ರತಿಭಟನಾ ಪ್ರದರ್ಶನ ನಡೆಸಲಾಗಿದೆ.
ಕೇಂದ್ರ ಮುಶಾವರ ಸದಸ್ಯ ಬಿಕೆ ಅಬ್ದುಲ್ ಖಾದರ್ ಖಾಸಿಮಿ, ಕರ್ನಾಟಕ ಮುಶಾವರ ಕಾಯಾಧ್ಯಕ್ಷ ಇಬ್ರಾಹಿಂ ಬಾಖವಿ, ಎಸ್‌ವೈಎಸ್ ರಾಜ್ಯ ಸಂಚಾಲಕ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕೇಂದ್ರ ಸಮಿತಿ ಸದಸ್ಯರಾದ ಎಸ್‌ಬಿ ಮುಹಮ್ಮದ್ ದಾರಿಮಿ, ಮುಸ್ತಫಾ ಫೈಝಿ ಕಿನ್ಯ, ಹಕೀಮ್ ಪರ್ತಿಪಾಡಿ, ಮುದರ್ರಿಸೀನ್ ನಾಯಕ ಹೈದರ್ ದಾರಿಮಿ ಕರಾಯ,ಜಿಲ್ಲಾ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಹಾಗೂ ಎಸ್‌ವೈಎಸ್, ಎಸ್ಕೆಎಸೆಸ್ಸೆಫ್, ಜಂಇಯ್ಯತುಲ್ ಮುಅಲ್ಲಿಮೀನ್, ಜಂಇಯ್ಯತುಲ್ ಖುತಬಾ, ಜಂಇಯ್ಯತುಲ್ ಮದರ್ರಿಸೀನ್,ಎಸ್ಕೆಎಸ್‌ಬಿವಿ ಮುಂತಾದ ಸಮಸ್ತ ಪೋಷಕ ಸಂಘಟನೆಯ ಎಲ್ಲಾ ಸದಸ್ಯರು ಮತ್ತು ಸಮಸ್ತಾಭಿಮಾನಿಗಳು ಪ್ರತಿಭಟನೆಯ ಪ್ರದರ್ಶನ ನಡೆಸಿದರು.