×
Ad

​ಸರಕಾರಿ ಕೋಟಾ ಬೆಡ್‌ಗಳ ಪಾರದರ್ಶಕ ನಿರ್ವಹಣೆಗೆ ಡಿವೈಎಫ್‌ಐ ಆಗ್ರಹ

Update: 2021-05-15 18:12 IST
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 15: ಕೊರೋನ ಸೋಂಕಿತರಿಗೆ ಸರಕಾರಿ ಕೋಟಾದಡಿ ಶೇ.50 ಹಾಸಿಗೆಗಳನ್ನು ಮೀಸಲಿರಿಸಿ ದ.ಕ. ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಕೂಡಾ ಅದಿನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಖಾಸಗಿ ಆಸ್ಪತ್ರೆಗಳು ಎಲ್ಲಾ ಬೆಡ್‌ಗಳಿಗೂ ಮಾರುಕಟ್ಟೆ ದರದಲ್ಲಿ ರೋಗಿ ಗಳಿಗೆ ದುಬಾರಿ ಬಿಲ್ ವಿಧಿಸುತ್ತಿವೆ. ಕೇವಲ ಐಸಿಯು, ವೆಂಟಿಲೇಟರ್‌ಗಳಲ್ಲಿ ಮಾತ್ರ ಕೋವಿಡ್ ರೋಗಿಗಳಿಗೆ ಸರಾಸರಿ ಅರ್ಧದಷ್ಟು ಬೆಡ್‌ಗಳಲ್ಲಿ ಆಯುಷ್ಮಾನ್ ಅಡಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳ ದರ, ಸರಕಾರಿ ಕೋಟಾ ಬೆಡ್‌ಗಳ ಪಾರದರ್ಶಕ ನಿರ್ವಹಣೆ ಮಾಡಬೇಕು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕೆಲವು ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಗೆ ತಮ್ಮ ಆಸ್ಪತ್ರೆ ಒಳಪಡುವುದಿಲ್ಲ ಅಥವಾ ಆಯುಷ್ಮಾನ್ ಅಡಿ ಬರುವ ಐಸಿಯು ಬೆಡ್‌ಗಳು ಭರ್ತಿ ಆಗಿವೆ ಎಂದು ರೋಗಿಗಳನ್ನು ವಂಚಿಸುವ ದೂರುಗಳು ಕೇಳಿ ಬರುತ್ತಿವೆ. ಜಿಲ್ಲಾಡಳಿತ ಈ ಕುರಿತು ನೋಡಲ್ ಅಧಿಕಾರಿಗಳ ಮೂಲಕ ಖಾಸಗಿ ಆಸ್ಪತ್ರೆಗಳು ಪ್ರತಿಯೊಂದು ಕೊರೋನ ರೋಗಿಗಳಿಗೆ ವಿಧಿಸುವ ಬಿಲ್, ಐಸಿಯು ಬೆಡ್‌ಗಳ ಸಮಗ್ರ ಮಾಹಿತಿಯನ್ನು ಪ್ರತಿದಿನ ಪಡೆದು ಕೊಂಡು ಪಾರದರ್ಶಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶೇ.50 ಬೆಡ್‌ಗಳು ಸರಕಾರಿ ಕೋಟಾ ಎಂಬ ಜಿಲ್ಲಾಡಳಿತದ ಆದೇಶ ಎಲ್ಲಿಯೂ ಜಾರಿಯಾಗಿಲ್ಲ. ಬದಲಿಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇರುವುದರಿಂದ ಖಾಸಗಿ ಆಸ್ಪತ್ರೆಯ ಬೆಡ್ ಗಳನ್ನು ಬಳಸುತ್ತಿಲ್ಲ ಎಂದು ಜಿಲ್ಲಾಡಳಿತ ಕೊರೋನ ಸೋಂಕಿತರ ಪಾಲಿಗೆ ಆಘಾತಕಾರಿಯಾಗಿರುವ ನಿಬಂಧನೆಯನ್ನು ವಿಧಿಸಿಕೊಂಡಿದೆ. ಇದರಿಂದ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿತರಿಗೆ ದುಬಾರಿ ಬಿಲ್ಗಳನ್ನು ಹಾಕಲು ಅವಕಾಶ ಮಾಡಿಕೊಟ್ಟಿದೆ. ಸರಕಾರ ಕೋವಿಡ್ ಸೋಂಕಿತರಿಗೆ ಖಾಸಗಿ ಕೋಟಾದಲ್ಲಿ ನಿಗದಿಪಡಿಸಿರುವ ದರ ದಿನ ವೊಂದಕ್ಕೆ ಸಾಮಾನ್ಯ ಬೆಡ್‌ಗೆ ಹತ್ತು ಸಾವಿರ, ಐಸಿಯು ಬೆಡ್‌ಗೆ ಹದಿನೈದು ಸಾವಿರ, ವೆಂಟಿಲೇಟರ್ ಬೆಡ್‌ಗೆ 25 ಸಾವಿರ ರೂ. ಕೂಡ ದುಬಾರಿಯಾಗಿದೆ. ಅದಲ್ಲದೆ ಪಿಪಿಇ ಕಿಟ್, ಸಾಮಾನ್ಯ ಔಷಧಿ, ಆಕ್ಸಿಜನ್ ದರಗಳನ್ನು ಪ್ರತ್ಯೇಕವಾಗಿ ಪಡೆಯುತ್ತವೆ. ವಿವಿಧ ದುಬಾರಿ ಪರೀಕ್ಷೆ, ಔಷಧಿಗಳನ್ನು ನೀಡಿ ಲಕ್ಷಗಟ್ಟಲೆ ಬಿಲ್ ಮಾಡಿ ಕೊರೋನ ರೋಗಿಗಳನ್ನು ತೀರಾ ಅಸಹಾಯಕ ಸ್ಥಿತಿಗೆ ದೂಡಿವೆ. ಇಂತಹ ವಿಪರೀತ ಬಿಲ್ಗಳಿಂದ ರೋಗಿಯನ್ನು ಡಿಸ್‌ಜಾರ್ಜ್‌ ಮಾಡಲು ಸಾಧ್ಯವಾಗದೆ ಕುಟುಂಬಸ್ಥರು ಪರಿತಪಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ತುರ್ತು ಸಭೆ ನಡೆಸಿ ಈ ಕುರಿತು ಕ್ರಮಕ್ಕೆ ಮುಂದಾಗಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News