ಮನಪಾ ವಜಾಗೊಳಿಸಲ್ಪಟ್ಟ 15 ಹೊರಗುತ್ತಿಗೆ ನೌಕರರ ಮರು ನೇಮಕಕ್ಕೆ ಕಾಂಗ್ರೆಸ್ ಒತ್ತಾಯ
ಮಂಗಳೂರು, ಮೇ 15: ಮಂಗಳೂರು ಮಹಾನಾಗರ ಪಾಲಿಕೆಯ ತುಂಬೆ ನೀರು ಸರಬರಾಜು ವಿಭಾಗದ ರೇಚಕ ಸ್ಥಾವರದಲ್ಲಿ ಕೆಲಸ ಮಾಡು ತ್ತಿದ್ದ 15 ಮಂದಿ ಹೊರಗುತ್ತಿಗೆ ನೌಕರರನ್ನು ಮರು ನೇಮಕಗೊಳಿಸಬೇಕು ಎಂದು ಮನಪಾ ವಿಪಕ್ಷ ನಾಯಕ ಎಸಿ ವಿನಯರಾಜ್ ಒತ್ತಾಯಿಸಿದ್ದಾರೆ.
ತುರ್ತು ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿಲ್ಲ ಎಂದು ಮನಪಾ ಆಯುಕ್ತರು ನೌಕರರನ್ನು ವಜಾಗೊಳಿಸಿದ್ದಾರೆ. ಅವರ ಸೇವೆ ಅಗತ್ಯ ವಿಲ್ಲ ಎಂದು ಆದೇಶ ಹೊರಡಿಸಿ ಹೊರಗುತ್ತಿಗೆ ಏಜನ್ಸಿ ಗ್ರೀನ್ ಎನ್ವಿರೋಟೆಕ್ಸರ್ವಿಸಸ್‌ಗೆ ತಿಳಿಸಿದ್ದಾರೆ. ತುಂಬೆ ನೀರು ಸರಬರಾಜು ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 14 ಮಂದಿಗೆ ಕೊರೋನಾ ಸೋಂಕು ತಗಲಿ ಅವರು ಚಿಕಿತ್ಸೆಯಲ್ಲಿದ್ದಾರೆ. ವಜಾಗೊಳಿಸಲ್ಪಟ್ಟ ಹೊರಗುತ್ತಿಗೆ ನೌಕರರು ರೇಚಕ ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸಲು ತಯಾರಿರುತ್ತಾರೆ. ಆದರೆ ಈ ಸ್ಥಾವರದ ಪ್ರದೇಶದಲ್ಲಿ ಈಗಾಗಲೇ ಕೊರೋನ ವೈರಸ್ ವ್ಯಾಪಿಸಿದ್ದು, ಸೋಂಕು ತಗಲದಂತೆ ಮನಪಾ ಆಡಳಿತ ಅಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ನೌಕರರಿಗೆ ಪಿಪಿಇ ಕಿಟ್ ಕೊಟ್ಟಿಲ್ಲ. ಈ ಬಗ್ಗೆ ವೌನ ವಹಿಸಿರುವ ಮನಪಾ ಆಡಳಿತವು ಕೊರೋನ ಸಂದರ್ಭದಲ್ಲೂ ಅಮಾನವೀಯತೆ ಮೆರೆದಿದೆ ಎಂದು ವಿನಯರಾಜ್ ಆಪಾದಿಸಿದ್ದಾರೆ.
ವಜಾಗೊಳಿಸಲ್ಪಟ್ಟ ನೌಕರರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಹೊರಗುತ್ತಿಗೆಯ ಮೂಲಕ ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರಾಗಿದ್ದು, ಏಕಾಏಕಿ ಕರ್ತವ್ಯದಿಂದ ವಜಾ ಮಾಡಿರುವುದರಿಂದ ಅವರ ಕುಟುಂಬ ಕಂಗಾಲಾಗಿದೆ. ಕಾರಣ ಕೇಳಿ ನೋಟಿಸ್ ಕೂಡ ನೀಡದೆ ನಿಯಮ ಉಲ್ಲಂಘಿಸಿದೆ. ಮನಪಾದ ಏಕಪಕ್ಷೀಯ ತೀರ್ಮಾನದಿಂದ ಸಿಬ್ಬಂದಿಯ ಕೊರತೆ ಎದುರಾಗಲಿದೆ ಎಂದು ವಿನಯರಾಜ್ ತಿಳಿಸಿದ್ದಾರೆ.