ಯುಪಿಸಿಎಲ್‌ನಿಂದಾಗುವ ಮಾಲಿನ್ಯದ ಬಗ್ಗೆ ಪರಿಸರ ಇಲಾಖೆಯ ಉತ್ತರಕ್ಕೆ ಎಲ್ಲೂರು ಗ್ರಾಪಂ ಆಕ್ರೋಶ

Update: 2021-05-15 13:32 GMT
ಜಯಂತ್‌ ಕುಮಾರ್

ಪಡುಬಿದ್ರಿ, ಮೇ 15: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸು ತ್ತಿರುವ ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ದಿಂದ ಎಲ್ಲೂರು ಹಾಗೂ ಪರಿಸರದ ಗ್ರಾಮಗಳ ಮೇಲಾಗುತ್ತಿರುವ ವಿವಿಧ ಮಾಲಿನ್ಯ ಗಳು ಹಾಗೂ ಅವುಗಳ ಪರಿಹಾರಕ್ಕೆ ತೆಗೆದುಕೊಂಡ ಕ್ರಮಗಳ ಕುರಿತಂತೆ ಎಲ್ಲೂರು ಗ್ರಾಪಂ ಕೇಳಿದ ಲಿಖಿತ ಮಾಹಿತಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಣಿಪಾಲ ಪ್ರಾದೇಶಿಕ ಕಚೇರಿ ನೀಡಿದ ಉತ್ತರದ ಬಗ್ಗೆ ಎಲ್ಲೂರು ಗ್ರಾಮ ಪಂಚಾಯತ್ ಕೆ. ಅಧ್ಯಕ್ಷ ಜಯಂತ್‌ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲೂರು ಗ್ರಾಪಂ ಕೇಳಿದ ಮಾಹಿತಿಗೆ ಜಿಲ್ಲಾ ಪರಿಸರ ಅಧಿಕಾರಿ ನೀಡಿರುವ ಉತ್ತರ, ಯುಪಿಸಿಎಲ್ ಕಂಪೆನಿಯ ಯಾವುದೋ ಆಮಿಷಕ್ಕೆ ಒಳಗಾಗಿ ನೀಡಿದಂತಿದ್ದು, ನಿಜಸ್ಥಿತಿಯನ್ನು ಸಂಪೂರ್ಣವಾಗಿ ಮರೆಮಾಚುವಂತಿದೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯುಪಿಸಿಎಲ್ ಕಂಪೆನಿಯಿಂದ ಪರಿಸರ ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಮಾಹಿತಿಯನ್ನು ಕೇಳಿ ಎಲ್ಲೂರು ಗ್ರಾಪಂ ವತಿಯಿಂದ ಮಾ.19ರಂದು ಪರಿಸರ ಇಲಾಖೆಗೆ ಪತ್ರ ಬರೆದಿದ್ದು, ಪದೇ ಪದೇ ದೂರವಾಣಿಯಲ್ಲಿ ವಿಚಾರಿಸಿದ ಬಳಿಕ ಎ.24ರಂದು ಲಿಖಿತ ಉತ್ತರ ನೀಡಿದ್ದು, ಅದು ನೈಜಸ್ಥಿತಿಯನ್ನು ಮುಚ್ಚಿಟ್ಟು ಕಣ್ಣೊರೆಸುವ ತಂತ್ರದಂತೆ ಕಂಡುಬರುತ್ತಿದೆ ಎಂದರು.

ಇಲಾಖೆಯ ಉತ್ತರ: ಯೋಜನೆಯಿಂದ ಪರಿಸರದಲಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕೇಳಿದ ಮಾಹಿತಿಗೆ ಇಲಾಖೆ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ (2020ರ ಜನವರಿಯಿಂದ 2021ರ ಜನವರಿ) ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ ಎಂದು ಉತ್ತರಿಸಲಾಗಿದೆ.

ಜಲಮಾಲಿನ್ಯದ ಬಗ್ಗೆ ಕಂಪೆನಿಯ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಲದ (ಕೊಳವೆ ಬಾವಿ, ತೆರೆದ ಬಾವಿ, ನದಿ ನೀರು ಹಾಗೂ ಸಮುದ್ರ ನೀರು) ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲಾಗುತಿದ್ದು, ಇದರಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ ಎಂದು ಉತ್ತರಿಸಲಾಗಿದೆ. ಇನ್ನು ಶಬ್ದ ಮಾಲಿನ್ಯದ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಎಲ್ಲ ಎಂದು ಹೇಳಲಾಗಿದೆ.

ಕಂಪೆನಿಯ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಒಯ್ಯುವ ಪೈಪ್‌ಲೈನ್ ಒಡೆದು ಬಹುಕಾಲ ಕಳೆದರೂ, ಇದರಿಂದ ಪರಿಸರದ ಮೀನುಗಾರರಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರಿದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಕೇಳಿದ ಪ್ರಶ್ನೆಗೆ, ಕಲುಷಿತ ನೀರನ್ನು ಬ್ರೇಕ್‌ವಾಟರ್ ಮೂಲಕ ಎರಡು ಪ್ರತ್ಯೇಕ ಕೊಳವೆಗಳಲ್ಲಿ ಒಯ್ಯಲಾಗುತಿದ್ದು, ಇದರಲ್ಲಿ ಒಂದು ಕೊಳವೆ ಅಲೆಗಳ ಹೊಡೆತಕ್ಕೆ ತುಂಡಾಗಿದ್ದು ಅದರ ದುರಸ್ತಿ ಕಾರ್ಯ ನಡೆಯುತ್ತಿದೆ. ಕಂಪೆನಿ ಈಗ ಕಲುಷಿತ ನೀರನ್ನು ಇನ್ನೊಂದು ಕೊಳವೆಯ ಮೂಲಕ ಸಮುದ್ರಕ್ಕೆ ಬಿಡುತ್ತಿದೆ ಎಂದು ಲಿಖಿತ ಮಾಹಿತಿಯಲ್ಲಿ ತಿಳಿಸಲಾಗಿದೆ.

ಉತ್ತರ ಸತ್ಯಕ್ಕೆ ದೂರ:  ಪರಿಸರ ಇಲಾಖೆ ಸಂಬಂಧಿತ ಗ್ರಾಪಂಗೆ ನೀಡಿರುವ ಲಿಖಿತ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಎಲ್ಲೂರು ಗ್ರಾಪಂ ಅಧ್ಯಕ್ಷ ಕೆ. ಜಯಂತ ಕುಮಾರ್ ಹೇಳಿದ್ದಾರೆ. ಜಿಲ್ಲೆಯ ಪರಿಸರ ಅಧಿಕಾರಿ ನೀಡಿರುವ ತಪ್ಪು ಮಾಹಿತಿಯ ವರದಿಯನ್ನು ಹಸಿರು ಪೀಠದ ಮುಂದೆ ಶೀಘ್ರವೇ ಮಂಡಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯೋಜನೆಯ ಪರಿಸರ ಮಾಲಿನ್ಯದಿಂದ ಜನಜೀವನ ಹಾಗೂ ಆರೋಗ್ಯ ಪರಿಸ್ಥಿತಿ ದುಸ್ತರಗೊಳ್ಳುತ್ತಿರುವ ಬಗ್ಗೆ ಮೂರ್ನಾಲ್ಕು ತಿಂಗಳ ಹಿಂದೆ ಹಸಿರು ಪೀಠ ನೇಮಿಸಿದ ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿಯನ್ನು ನೀಡಿತ್ತು. ಅದರ ಬಳಿಕ ಯೋಜನೆಯಿಂದಾಗುತ್ತಿರುವ ಮಾಲಿನ್ಯ ಮತ್ತು ಕೋವಿಡ್-19 ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಗ್ರಾಮದ ಜನರ ಆರೋಗ್ಯ ಮತ್ತು ಪರಿಸರ ಕಾಳಜಿ ಯಿಂದ ಯೋಜನೆ ಮಾಲಿನ್ಯಗಳನ್ನು ಪರಾಮರ್ಶಿಸುವ ಸಲುವಾಗಿ ಪರಿಸರ ಅಧಿಕಾರಿಗೆ ಪತ್ರ ಬರೆಯಲಾಗಿತ್ತು ಎಂದವರು ಹೇಳಿದರು.

ಪರಿಸರ ಇಲಾಖೆ ನೀಡಿರುವ ಮಾಹಿತಿಗಳು ಸಂಪೂರ್ಣವಾಗಿ ಕಂಪೆನಿ ಪರವಾಗಿದ್ದು, ವರದಿಯಲ್ಲಿ ಸಂಪೂರ್ಣ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ ಎಂದು ಜಯಂತ್‌ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂಗಾಗಲೀ, ಯೋಜನೆಯಿಂದ ಬಾಧಿತವಾದ ಪ್ರದೇಶಕ್ಕಾಗಲೀ ಭೇಟಿ ನೀಡದೆ ದೂರದ ಮಣಿಪಾಲದ ಕಚೇರಿಯಲ್ಲಿ ಕುಳಿತು ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿ ಸ್ಥಳಕ್ಕೆ ಬಂದರೆ ಯೋಜನೆಯಿಂದ ಆಗುತ್ತಿರುವ ಮಾಲಿನ್ಯವನ್ನು ಆಧಾರ ಸಹಿತವಾಗಿ ತೋರಿಸಲು ಸಿದ್ಧನಿರುವುದಾಗಿ ಅವರು ಸವಾಲು ಹಾಕಿದ್ದಾರೆ.

ದೇಶಿ ಕಲ್ಲಿದ್ದಲು ಬಳಕೆ

ಇದುವರೆಗೆ ಕಂಪೆನಿ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಕಲ್ಲಿದ್ದಲನ್ನು ಬಳಸಿ ವಿದ್ಯುತ್ ಉತ್ಪಾದಿಸುತಿದ್ದು, ಇದರಿಂದ ಮಾಲಿನ್ಯ ಭಾಗಶ: ಕಡಿಮೆ ಇತ್ತು. ಆದರೆ, ಇದೀಗ ಯುಪಿಸಿಎಲ್ ಕಂಪೆನಿ ದೇಶೀಯ ಕಲ್ಲಿದ್ದನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದೆ. ಇದರಿಂದ ಆಸುಪಾಸಿನ ಪರಿಸರ, ನೆಲ,ಜಲ, ವಾಯು ಮಾಲಿನ್ಯದೊಂದಿಗೆ ಜನರ ಜೀವನ ದುಸ್ತರಗೊಳ್ಳಲಿದೆ.

ಈ ಬಗ್ಗೆ ಪರಿಸರ ಅಧಿಕಾರಿಯವರನ್ನು ಪ್ರಶ್ನಿಸಿದಾಗ, ಕಂಪೆನಿಗೆ ದೇಶೀಯ ಕಲ್ಲಿದ್ದಲನ್ನು ಬಳಸಲು ಕೇಂದ್ರ ಸರಕಾರದ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ. ಈ ಬಗ್ಗೆಯೂ ನಾವು ಹಸಿರುಪೀಠದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಜಯಂತ್‌ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News