×
Ad

ತೌಕ್ತೆ ಚಂಡಮಾರುತ; ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ: ತತ್ತರಿಸಿದ ಜನತೆ

Update: 2021-05-15 19:51 IST

ಮಂಗಳೂರು, ಮೇ 15: ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡ ತೌಕ್ತೇ ಚಂಡಮಾರುತದ ಪರಿಣಾಮದಿಂದ ದ.ಕ ಜಿಲ್ಲಾದ್ಯಂತ ಶನಿವಾರ ಮುಂಜಾನೆಯಿಂದ ಬಿರುಸಿನ ಮಳೆಯಾಗಿದೆ. ದಿನವಿಡೀ ಎಡೆಬಿಡದೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಜನತೆ ಅಕ್ಷರಶಃ ತತ್ತರಿಸಿದರು. ಸಂಜೆಯ ವೇಳೆಗಷ್ಟೇ ಗಾಳಿ ಮಳೆ ತನ್ನ ಚಲನ ನಿಲ್ಲಿಸಿತ್ತು.

ಕೊರೋನ ಲಾಕ್‌ಡೌನ್ ಹಿನ್ನಲೆಯಲ್ಲಿ ವಾರಾಂತ್ಯ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕ ವರ್ಗವು ನಿರ್ಮಾಣ ಕಾಮಗಾರಿ ಸಹಿತ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದರೂ ಕೂಡ ಮಳೆಯಿಂದಾಗಿ ಎಲ್ಲವನ್ನೂ ಸ್ಥಗಿತಗೊಳಿಸಿದರು.

ಮಳೆಯಿಂದಾಗಿ ಮನೆಯಿಂದ ಹೊರಗೆ ಬರಲಾಗದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲಾಗದೆ ಪರಿತಪಿಸಿದರು. ಅಂಗಡಿ, ತರಕಾರಿ, ಮೀನು, ಮಾಂಸ ಮಾರುಕಟ್ಟೆಗಳು ತೆರೆದಿದ್ದರೂ ಕೂಡ ಜನರಿಗೆ ಅಗತ್ಯ ವಸ್ತುಗಳನ್ನು ಸಕಾಲಕ್ಕೆ ಖರೀದಿಸಲು ಸಾಧ್ಯವಾಗಲಿಲ್ಲ. ಜಿಲ್ಲೆಯ ನಗರ ಮತ್ತು ಗ್ರಾಮಾಂತರದಲ್ಲಿ ಭಾರೀ ಮಳೆಯಾಗಿದ್ದು, ಉಳ್ಳಾಲ, ಕೋಟೆಪುರ, ಉಚ್ಚಿಲ, ಸಸಿಹಿತ್ಲು ಸಹಿತ ಕಡಲ ತೀರದ ಅನೇಕ ಕಡೆ ಪ್ರಕ್ಷುಬ್ಧ ವಾತಾವರಣ ಕಂಡು ಬಂತು. ಕಡಲ ಅಲೆಗಳ ಆರ್ಭಟದಿಂದ ತೀರ ಪ್ರದೇಶದ ಮನೆ ಸಹಿತ ಕೆಲವು ಕಟ್ಟಡಗಳನ್ನು ಸಮುದ್ರ ಆಹುತಿ ಪಡೆದಿದೆ. ಮುಂಜಾಗರೂಕತಾ ಕ್ರಮವಾಗಿ ಹಲವಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೆಲವರು ಕಾಳಜಿ ಕೇಂದ್ರದಲ್ಲಿ ಮತ್ತು ಇನ್ನು ಕೆಲವರು ಸಂಬಂಧಿಕರ ಮನೆಯ ಆಶ್ರಯ ಪಡೆದಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ತಲೆದೋರಿರುವ ತೌಕ್ತೇ ಚಂಡಮಾರುತವು ಗುಜರಾತ್ ಕಡೆಗೆ ಸಾಗುತ್ತಿದ್ದರೂ ಕೂಡ ಅದರ ಪ್ರಭಾವದಿಂದ ದ.ಕ.ಜಿಲ್ಲೆಯ ಕಡಲ ತೀರವು ಪ್ರಕ್ಷುಬ್ದ ಸ್ಥಿತಿಯಲ್ಲಿತ್ತು. ತಲಪಾಡಿ-ಉಳ್ಳಾಲದಿಂದ ಸಸಿಹಿತ್ಲು-ಮುಲ್ಕಿಯವರೆಗೂ ಕಡಲು ಉಕ್ಕೇರಿತ್ತು. ಬಹುತೇಕ ಕಡೆಯ ಬೀಚ್ ರಸ್ತೆಗಳ ಮೇಲೆ ಸಮುದ್ರದ ಅಲೆ ಅಪ್ಪಳಿಸಿದೆ. ಉಳ್ಳಾಲ, ಸಸಿಹಿತ್ಲು, ಮುಕ್ಕ, ಸುರತ್ಕಲ್, ಹೊಸಬೆಟ್ಟು ಮತ್ತಿತರ ಕಡೆ ಸಮುದ್ರ ನೀರು ತೀರದ ಅನೇಕ ಮನೆಗಳನ್ನು ಆವರಿಸಿತ್ತು.

ಸತತವಾಗಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಲವು ಕಡೆ ಮರಗಳು ಉರುಳಿದೆ. ವಿದ್ಯುತ್ ಕಂಬಗಳು ನೆಲಸಮವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಗುಡ್ಡ, ಕಾಂಪೌಂಡ್ ಕುಸಿತಗೊಂಡಿದೆ. ಸಸಿಹಿತ್ಲು ಬೀಚ್ ಬಳಿ ಗ್ರಾಪಂ ವತಿಯಿಂದ ನಿರ್ಮಿಸಲಾಗಿದ್ದ ಅಂಗಡಿ ಕಟ್ಟಡವೊಂದು ಸಮುದ್ರ ಪಾಲಾಗಿದೆ. ನಗರದ ಕಂಕನಾಡಿಯ ಬಿ ಗ್ರಾಮದ ಉಜ್ಜೋಡಿ ಎಂಬಲ್ಲಿ ಸಚಿನ್ ಪಟೇಲ್ ಎಂಬವರ ಮನೆಗೆ ನೀರು ನುಗ್ಗಿದೆ. ಮೂಲ್ಕಿ ಹೋಬಳಿಯ ತಾಳಿಪ್ಪಾಡಿ ಎಂಬಲ್ಲಿ ಗುತ್ತಕಾಡು ಗೋಪಾಲ ಎಂಬವರ ಮನೆಗೆ ನೀರು ನುಗ್ಗಿದ್ದು ಮನೆ, ಕಾಂಪೌಂಡ್‌ಗೆ ಹಾನಿಯಾಗಿದೆ.

ಮೂಡುಶೆಡ್ಡೆ ಗ್ರಾಮದ ವತ್ಸಲಾ ಎಂಬವರ ಮನೆ ಬದಿಯ ಗುಡ್ಡ ಜರಿದು ಭಾಗಶಃ ಹಾನಿಯಾಗಿದೆ. ಮಳವೂರು ಗ್ರಾಮದ ವಿಮಲಾ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುತ್ತೆತ್ತೂರಿನ ಪದ್ಮಾವತಿ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಸಹಿತ ವಿವಿಧ ಕಾಮಗಾರಿಗಳು ಅರ್ಧಂಬರ್ಧ ನಡೆಯುತ್ತಿದ್ದು, ಶನಿವಾರ ಸತತ ಮಳೆ ಸುರಿದ ಪರಿಣಾಮ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ನೀರು ನಿಂತು ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಕಾರ್‌ಸ್ಟ್ರೀಟ್ ಸಹಿತ ಬಹುತೇಕ ರಸ್ತೆಗಳು ಕೆರೆಯಂತಿತ್ತು. ಕೋರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಓಡಾಟ, ವಾಹನಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಹೆಚ್ಚಿನ ಸಮಸ್ಯೆ ಆಗಲಿಲ್ಲ.

ಗ್ರಾಮೀಣ ಭಾಗದಲ್ಲೂ...

ನಗರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕೂಡ ಭಾರೀ ಮಳೆಯಾಗಿದೆ. ನದಿಗಳು ಭಾಗಶಃ ತುಂಬಿ ಹರಿಯತೊಡಗಿವೆ. ಅಲ್ಲದೆ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರ ಹೊರವಲಯದ ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ರಸ್ತೆಗೆ ಮಾವಿನ ಮರ ವೊಂದು ಮುರಿದು ಬಿದ್ದು 4 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಈ ವೇಳೆ ಓಮ್ನಿ ವಾಹನವೊಂದು ಕೂದಲೆಳೆ ಅಂತರದಲ್ಲಿ ಅವಘಡದಿಂದ ಪಾರಾಯಿತು ಎನ್ನಲಾಗಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಮರ, ವಿದ್ಯುತ್ ಕಂಬಗಳನ್ನು ತೆರವು ಮಾಡಿದರು. ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.

ಮೇಯರ್ ಭೇಟಿ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಸುರಿದ ಪರಿಣಾಮ ನಗರದ ಮಂಕಿ ಸ್ಟ್ಯಾಂಡ್, ಪಡೀಲ್, ಬಜಾಲು ಕಾವುಬೈಲ್ ಪ್ರಗತಿ ನಗರ ಮತ್ತಿತರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಪಾಲಿಕೆಯ ಸದಸ್ಯರಾದ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಚಂದ್ರಾವತಿ, ಕಾರ್ಯಪಾಲಕ ಅಭಿಯಂತರ ರವಿಶಂಕರ್ ಉಪಸ್ಥಿತರಿದ್ದರು.

ಮಳೆಗಾಲದ ಅನುಭವ

ಸಾಮಾನ್ಯವಾಗಿ ಕರಾವಳಿಯಲ್ಲಿ ಮೇ ತಿಂಗಳ ಸುಡುಬಿಸಿಲಿನ ಅನುಭವ. ಆದರೆ ತೌಕ್ತೇ ಚಂಡಮಾರುತದಿಂದಾಗಿ ಶನಿವಾರ ಅಕ್ಷರಶಃ ಮಳೆಗಾಲದ ಅನುಭವವಾಗಿದೆ. ಜೂನ್ ತಿಂಗಳ ವಾತಾವರಣ ಕಂಡು ಬಂದಿದ್ದು ತಾಪಮಾನ ದಿಢೀರ್ ಬದಲಾಗಿದೆ. ಕನಿಷ್ಠ 22 ಡಿಗ್ರಿ ಹಾಗೂ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಎರಡ್ಮೂರು ವರ್ಷ ಹಿಂದೆ ಮೇ 21ರಂದು ಜಿಲ್ಲೆಯಲ್ಲಿ ಸುರಿದ ಮಹಾಮಳೆಯನ್ನೇ ಶನಿವಾರದ ಮಳೆಯೂ ನೆನಪಿಸಿತು.

ಕಾಳಜಿ ಕೇಂದ್ರ

ನಗರದ ಹೊಯಿಗೆ ಬಝಾರ್ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಆಸುಪಾಸಿನ ಸುಮರು 33 ಮಂದಿಗೆ ಈ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಅಲ್ಲದೆ ಹೊಯಿಗೆ ಬಝಾರ್ ಪರಿಸರದ 37 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅದಲ್ಲದೆ ಪಣಂಬೂರು ಸಮೀಪದ ಮೀನ ಕಳಿಯ ಕೂರಿಕಟ್ಟ ಎಂಬಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 14 ಮಂದಿಗೆ ಆಶ್ರಯ ನೀಡಲಾಗಿದೆ.

ಮಳೆ ವಿವರ

ಶನಿವಾರ ಬೆಳಗ್ಗೆ ವರದಿಯಾದಂತೆ ಕಳೆದ 24 ಗಂಟೆಗಳಲ್ಲಿ ಮಂಗಳೂರು ವಿಮಾನ ನಿಲ್ದಾಣ 8 ಸೆಂ.ಮೀ, ಮಂಗಳೂರು 7 ಸೆಂ.ಮೀ, ಸುಳ್ಯ 5, ಮಾಣಿ, ಮೂಡುಬಿದಿರೆ ಹಾಗೂ ಪುತ್ತೂರು ತಲಾ 4, ಸುಬ್ರಹ್ಮಣ್ಯ, ಧರ್ಮಸ್ಥಳ 2, ಮೂಲ್ಕಿ ಹಾಗೂ ಬೆಳ್ತಂಗಡಿ 1 ಸೆಂ.ಮೀ ಮಳೆಯಾಗಿದೆ.

ರವಿವಾರವೂ ರೆಡ್ ಅಲರ್ಟ್ 

ಮೇ 16ರಂದು ಕೂಡಾ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಮೇ 17ರಂದು ಆರೆಂಜ್ ಅಲರ್ಟ್ ಹಾಗೂ 18, 19ರಂದು ಯೆಲ್ಲೋ ಅಲರ್ಟ್ ಇದೆ ಎಂದು ತಿಳಿಸಿದೆ. ಆದಾಗ್ಯೂ ಇನ್ನೂ ನಾಲ್ಕೈದು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.

ಮೀನುಗಾರಿಕೆಗೆ ನಿಷೇಧ

ಸಮುದ್ರದಲ್ಲಿ ಗಂಟೆಗೆ 50ರಿಂದ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಮೀನುಗಾರರು ಕಡಲಿಗೆ ಇಳಿಯುವುದನ್ನು ಜಿಲ್ಲಾಡಳಿತ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News