ಭಾರತದಲ್ಲಿಯ ಕೋವಿಡ್-19 ಸ್ಥಿತಿ ಅತ್ಯಂತ ಕಳವಳಕಾರಿ: ಡಬ್ಲ್ಯುಎಚ್ಒ

Update: 2021-05-15 15:09 GMT

ವಿಶ್ವಸಂಸ್ಥೆ,ಮೇ 15: ಭಾರತದಲ್ಲಿ ಕೋವಿಡ್-19 ಸ್ಥಿತಿಯು ತೀವ್ರ ಕಳವಳಕಾರಿಯಾಗಿ ಮುಂದುವರಿದಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು,ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿಗಳು ಮತ್ತು ಸಾವುಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು,ಸಾಂಕ್ರಾಮಿಕದ ಎರಡನೇ ವರ್ಷವು ವಿಶ್ವಕ್ಕೆ ಮೊದಲ ವರ್ಷಕ್ಕಿಂತಲೂ ಹೆಚ್ಚು ಮಾರಣಾಂತಿಕವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಭಾರತದಲ್ಲಿ ಹೆಚ್ಚುತ್ತಿರುವ ಕೊರೋನವೈರಸ್ ಬಿಕ್ಕಟ್ಟಿಗೆ ಡಬ್ಲ್ಯುಎಚ್ಒ ಸ್ಪಂದಿಸುತ್ತಿದೆ ಮತ್ತು ಸಾವಿರಾರು ಆಮ್ಲಜನಕ ಸಾಂದ್ರಕಗಳು,ಮೊಬೈಲ್ ಫೀಲ್ಡ್ ಹಾಸ್ಪಿಟಲ್ಗಳಿಗಾಗಿ ಟೆಂಟ್ಗಳು,ಮಾಸ್ಕ್ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ. ಭಾರತಕ್ಕೆ ಬೆಂಬಲವನ್ನು ನೀಡುತ್ತಿರುವ ಎಲ್ಲ ದೇಶಗಳಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
 
ಕೋವಿಡ್ ತುರ್ತು ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಲ್ಲ. ನೇಪಾಳ,ಶ್ರೀಲಂಕಾ ವಿಯೆಟ್ನಾಂ,ಕಾಂಬೋಡಿಯಾ,ಥೈಲ್ಯಾಂಡ್ ಮತ್ತು ಈಜಿಪ್ತ್ನಂತಹ ರಾಷ್ಟ್ರಗಳಲ್ಲಿಯೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ ಎಂದ ೆಬ್ರೆಯೆಸಸ್,ಅಮೆರಿಕಾ ಖಂಡದಲ್ಲಿಯ ಕೆಲವು ರಾಷ್ಟ್ರಗಳಲ್ಲಿ ಈಗಲೂ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ ಮತ್ತು ಕಳೆದ ವಾರ ವಿಶ್ವದಲ್ಲಿ ಸಂಭವಿಸಿದ ಎಲ್ಲ ಸಾವುಗಳ ಪೈಕಿ ಶೇ.40ರಷ್ಟು ಸಾವುಗಳು ಈ ಖಂಡದಲ್ಲಿಯೇ ದಾಖಲಾಗಿವೆ ಎಂದರು.

ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿಯೂ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಡಬ್ಲ್ಯುಎಚ್ಒ ಮುಂದುವರಿಸಲಿದೆ ಎಂದ ಅವರು,ಕೋವಿಡ್-19 ಈಗಾಗಲೇ ವಿಶ್ವಾದ್ಯಂತ 3.3 ಮಿಲಿಯನ್ಗೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಬೆಟ್ಟು ಮಾಡಿದರು.

ಲಸಿಕೆಗಳ ಕೊರತೆ ಈಗಲೂ ಪ್ರಮುಖ ಸವಾಲಾಗಿಯೇ ಉಳಿದುಕೊಂಡಿದೆ ಎಂದು ವಿಷಾದಿಸಿದ ಅವರು,ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಲಸಿಕೆ ನೀಡಿಕೆ ಇವುಗಳ ಸಮನ್ವಯದೊಂದಿಗೆ ಜೀವಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸುವುದು ಸಾಂಕ್ರಾಮಿಕದಿಂದ ಪಾರಾಗಲು ಏಕಮೇವ ಮಾರ್ಗವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News