ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಎಂಟು ಮಕ್ಕಳು ಸೇರಿದಂತೆ 10 ಜನರ ಸಾವು

Update: 2021-05-15 14:47 GMT

ಗಾಝಾ ಸಿಟಿ,ಮೇ 15: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನ ವಾಯುದಾಳಿ ಐದನೇ ದಿನವೂ ಮುಂದುವರಿದಿದ್ದು, ಶನಿವಾರ ನಸುಕಿನಲ್ಲಿ ಶಾಟಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಎಂಟು ಮಕ್ಕಳು ಸೇರಿದಂತೆ ಒಂದೇ ಫೆಲೆಸ್ತೀನಿಯನ್ ಕುಟುಂಬದ ಕನಿಷ್ಠ 10 ಜನರು ಕೊಲ್ಲಲ್ಪಟ್ಟಿದ್ದಾರೆ.

ಅಬು ಹತಾಬ್ ಕುಟುಂಬಕ್ಕೆ ಸೇರಿದ ಮನೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಹಲವರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದ್ದು,ಅವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಒಂದು ಶಿಶು ಸೇರಿದಂತೆ ಕನಿಷ್ಠ 15 ಜನರು ಇಸ್ರೇಲ್‌ನ ವಾಯುದಾಳಿಯಿಂದ ಗಾಯಗೊಂಡಿದ್ದಾರೆ.

 ಅವಶೇಷಗಳ ಅಡಿಯಿಂದ ಇನ್ನಷ್ಟು ಶವಗಳನ್ನು ಹೊರತೆಗೆಯಲು ಮತ್ತು ಶವಗಳ ಗುರುತು ಪತ್ತೆ ಹಚ್ಚಲು ರಕ್ಷಣಾ ತಂಡಗಳು ಈಗಲೂ ಪ್ರಯತ್ನಿಸುತ್ತಿವೆ. ಇದು ನಿಜಕ್ಕೂ ಮಾರಣಹೋಮವಾಗಿದ್ದು,ಬಣ್ಣಿಸಲು ಶಬ್ದಗಳು ಸಿಗುತ್ತಿಲ್ಲ ಎಂದು ಅಲ್-ಶಿಫಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ನಬಿಲ್ ಅಬು ಅಲ್ ರೀಶ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. 
ಯಾವುದೇ ಎಚ್ಚರಿಕೆಯನ್ನು ನೀಡದೆ ದಾಳಿಯನ್ನು ನಡೆಸಲಾಗಿದೆ. ನಾವು ಹೊರಗಡೆ ಓಡಿದ್ದೆವು. ನಾಲ್ಕು ಅಂತಸ್ತುಗಳ ಮನೆ ನಮ್ಮ ಕಣ್ಣೆದುರೇ ಸಂಪೂರ್ಣವಾಗಿ ನೆಲಸಮಗೊಂಡಿತು ಎಂದು ಮನೆಯ ಮಾಲಿಕರ ಸಂಬಂಧಿಯೋರ್ವರು ತಿಳಿಸಿದರು. 

ದಾಳಿಯ ಸಂದರ್ಭ ಮನೆಮಾಲಿಕರ ಸೋದರಿ ತನ್ನ ಮಕ್ಕಳೊಂದಿಗೆ ಭೇಟಿ ನೀಡಿದ್ದರು. ಅವರೆಲ್ಲರೂ ಕೊಲ್ಲಲ್ಪಟ್ಟಿದ್ದಾರೆ ಎಂದರು.
ಮೃತರ ಅಂತ್ಯಸಂಸ್ಕಾರಗಳು ಶನಿವಾರ ಬೆಳಿಗ್ಗೆ ನಡೆದಿವೆ.
ಗಾಝಾ ಪಟ್ಟಿಯಲ್ಲಿನ ಎಂಟು ನಿರಾಶ್ರಿತರ ಶಿಬಿರಗಳಲ್ಲಿ ಶಾಟಿ ಮೂರನೇ ಅತಿ ದೊಡ್ಡ ಶಿಬಿರವಾಗಿದ್ದು,ಅದು 85,000ಕ್ಕೂ ಅಧಿಕ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಇವರೆಲ್ಲ ಕೇವಲ 0.52 ಚ.ಕಿ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಏಜೆನ್ಸಿ (ಯುಎನ್ಆರ್ಡಬ್ಲುಎ) ತಿಳಿಸಿದೆ.
 
ಗಾಝಾ ಪಟ್ಟಿಯನ್ನು ಆಳುತ್ತಿರುವ ಹಮಾಸ್ ಸಂಘಟನೆಯು ಶಾಟಿ ನಿರಾಶ್ರಿತರ ಶಿಬಿರದ ಮೇಲಿನ ದಾಳಿಗೆ ಉತ್ತರವಾಗಿ ಇಸ್ರೇಲ್‌ನ ಅಸ್ಕೆಲನ್ ಮತ್ತು ಆಷದೋದ್ ನಗರಗಳ ಮೇಲೆ ಹಲವಾರು ರಾಕೆಟ್ ಗಳನ್ನು ಉಡಾಯಿಸಿದ್ದು, ಯಾವುದೇ ಸಾವುಗಳು ವರದಿಯಾಗಿಲ್ಲ.

ಸೋಮವಾರದಿಂದ ಗಾಝಾದ ಮೇಲೆ ಇಸ್ರೇಲ್‌ನ ವಾಯುದಾಳಿಗಳಲ್ಲಿ 40 ಮಕ್ಕಳು ಸೇರಿದಂತೆ ಕನಿಷ್ಠ 139 ಫೆಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದು,920ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಹಮಾಸ್ ಇಸ್ರೇಲ್ ಮೇಲೆ ಉಡಾಯಿಸಿದ್ದ ಹೆಚ್ಚಿನ ರಾಕೆಟ್ ಗಳನ್ನು ಅಲ್ಲಿಯ ಡೋಮ್ ವಾಯು ರಕ್ಷಣಾ ವ್ಯವಸ್ಥೆಯು ಭೇದಿಸಿದ್ದು,ಒಂದು ಮಗು ಸೇರಿದಂತೆ ಎಂಟು ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ.

ಅತ್ತ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್‌ನ ನಿರಂತರ ಅತಿಕ್ರಮಣ ಮತ್ತು ಗಾಝಾದ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 13 ಪೆಲೆಸ್ತೀನಿಯನ್ರನ್ನು ಇಸ್ರೇಲ್ ಪಡೆಗಳು ಹತ್ಯೆಗೈದಿವೆ. ಇದೇ ವೇಳೆ ಇಸ್ರೇಲ್ನ ಫೆಲೆಸ್ತೀನಿಯನ್ ಪ್ರಜೆಗಳು ಮತ್ತು ಇಸ್ರೇಲಿ ಯಹೂದಿಗಳ ನಸುವೆ ಹಿಂಸಾಚಾರ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News