ಮೇ 17ಕ್ಕೆ ಅಂತಾರಾಷ್ಟ್ರೀಯ ಚೈಲ್ಡ್ ಹೆಲ್ಪ್‌ಲೈನ್ ದಿನ

Update: 2021-05-15 15:38 GMT

ಉಡುಪಿ, ಮೇ 15: ಮೇ 17ರ ಅಂತಾರಾಷ್ಟ್ರೀಯ ಚೈಲ್ಡ್ ಹೆಲ್ಪ್‌ಲೈನ್ ದಿನವನ್ನು ಮಕ್ಕಳ ಸಹಾಯವಾಣಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ಸರಕಾರ 1996ರಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಚೈಲ್ಡ್‌ಲೈನ್-1098 ನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಮೂಲಕ ದೇಶಾದ್ಯಂತ ಪ್ರಾರಂಭಿಸಿದೆ. ಚೈಲ್ಡ್‌ಲೈನ್ ಇಂಡಿಯಾ ಸ್ವಯಂಸೇವಾ ಸಂಸ್ಥೆಗೆ ಇದರ ಜವಾಬ್ದಾರಿ ನೀಡಿದ್ದು, ಅದು ಪ್ರಸ್ತುತ 598 ಕೇಂದ್ರಗಳಲ್ಲಿ ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾಯೋಜಿಸಲ್ಪಟ್ಟ ಸಹಾಯವಾಣಿ-1098ರ ಮೂಲಕ 18 ವರ್ಷದೊಳಗಿನ ಮಕ್ಕಳು ತಮ್ಮ ಸಮಸ್ಯೆಗಳಿಗೆ ದಿನದ 24 ಗಂಟೆಯೂ ಕೆ ಮಾಡಿ ಸಹಾಯ ಯಾಚಿಸಬಹುದಾಗಿದೆ.

ಜಿಲ್ಲೆಯಲ್ಲಿ 2019ರ ಮಾರ್ಚ್ 8ರಿಂದ ಕಾರ್ಯ ಆರಂಭಿಸಿದ ಚೈಲ್ಡ್‌ಲೈನ್ -1098 ಕುಕ್ಕಿಕಟ್ಟೆಯ ಬಾಲನಿಕೇತನ ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಶಾಲಾ ಕಾಲೇಜುಗಳು, ಬಸ್‌ನಿಲ್ದಾಣ, ರಿಕ್ಷಾನಿಲ್ದಾಣ, ಅಂಗಡಿ, ಕೈಗಾರಿಕ ಪ್ರದೇಶಗಳು, ಕೊಳಚೆ ಪ್ರದೇಶಗಳು, ರೈಲ್ವೇ ಸ್ಟೇಷನ್‌ಗಳಲ್ಲಿ ಹಾಗೂ ವಿವಿಧ ಸ್ವಸಹಾಯ ಸಂಘದ ಜನರಲ್ಲಿ ಚೈಲ್ಡ್‌ಲೈನ್-1098 ರ ಕುರಿತು ಜಾಗೃತಿ ಮೂಡಿಸಲಾಗಿದೆ.

ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜಿಲ್ಲೆಯ ಚೈಲ್ಡ್‌ಲೈನ್ -1098 ಕೂಡ ಕೈಜೋಡಿಸಿದ್ದು, ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸ ಲಾಗಿದೆ. ಲಾಕ್‌ಡೌನ್‌ನ ಅವಧಿಯಲ್ಲಿಯೂ ಕೂಡ ಚೈಲ್ಡ್‌ಲೈನ್-1098 ದಿನದ 24 ಗಂಟೆಯು ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಕರೆಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಚೈಲ್ಡ್‌ಲೈನ್ 1098 ರ ಕೇಂದ್ರ ಸಂಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News