ಮರವಂತೆ; ಕೊಚ್ಚಿ ಹೋದ ರಸ್ತೆ: ನೂರಾರು ತೆಂಗಿನ ಮರಗಳು ಕಡಲಪಾಲು

Update: 2021-05-15 15:51 GMT

ಕುಂದಾಪುರ, ಮೇ 15: ಚಂಡಮಾರುತದ ಪರಿಣಾಮ ಗಂಗೊಳ್ಳಿ, ಕಂಚು ಗೋಡು, ಮರವಂತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಲ ಅಲೆಗಳ ರುದ್ರ ನರ್ತನ ಮನೆ, ಮೀನುಗಾರಿಕಾ ದೋಣಿಗಳಿಗೆ ಅಪಾರ ಹಾನಿ ಉಂಟು ಮಾಡಿದ್ದು, ನೂರಾರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಹೊಸ ಕಾಂಕ್ರೀಟ್ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.

ಮರವಂತೆಯ ಹೊರಬಂದರು ಪ್ರದೇಶದ ವಿರುದ್ಧ ದಿಕ್ಕಿನಲ್ಲಿರುವ ಮೂರು ತಿಂಗಳ ಹಿಂದೆ 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯು ಕಡಲ ಅಲೆಗಳ ಅಬ್ಬರಕ್ಕೆ ಸಂಪೂರ್ಣ ಕುಸಿದು ಬಿದ್ದು, ಹಲವು ಭಾಗ ಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ಈ ಪ್ರದೇಶದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅದೇ ರೀತಿ ಇಲ್ಲಿನ ನಾಲ್ಕೈದು ವಿದ್ಯುತ್ ಕಂಬ ಗಳು ಕೂಡ ಧರೆಗೆ ಉರುಳಿವೆ.

ಮರವಂತೆ ಪ್ರದೇಶದಲ್ಲಿ ನಿನ್ನೆಯಿಂದ ಸುಮಾರು 150-200 ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಹೊಸಾಡು ಗ್ರಾಮದ ಕಂಚುಗೋಡು ಪರಿಸರದಲ್ಲಿ ಕಡಲ್ಕೊರೆತದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಕಂಚುಗೋಡು ಶ್ರೀ ರಾಮ ಮಂದಿರದ ಸಮೀಪ ಸುಮಾರು 15ಕ್ಕೂ ಮಿಕ್ಕಿ ತೆಂಗಿನ ಮರಗಳು ಉರುಳಿ ಬಿದ್ದಿವೆ. ಇಲ್ಲಿನ ವಾಸ್ತವ್ಯದ ಮನೆಯೊಂದು ಅಪಾಯದ ಭೀತಿಯಲ್ಲಿದೆ.

ಇದೇ ಪರಿಸರದಲ್ಲಿ ಕಡಲ ತೀರದ ಸನಿಹದಲ್ಲಿರುವ ಸುಮಾರು 10ಕ್ಕೂ ಮಿಕ್ಕಿ ಮೀನುಗಾರರ ಮನೆಗಳು ಕಡಲ್ಕೊರೆತದ ಭೀತಿ ಎದುರಿಸುತ್ತಿದೆ. ತೀರದಲ್ಲಿ ನಿಲ್ಲಿಸಿದ್ದ ಎರಡು ದೋಣಿಗಳಿಗೂ ಹಾನಿಯಾಗಿರುವ ಬಗ್ಗೆ ತಿಳಿದುಬಂದಿದೆ. ಗಂಗೊಳ್ಳಿ ಗ್ರಾಮದ ಬೇಲಿಕೇರಿ, ಮಲ್ಯರಬೆಟ್ಟು, ಖಾರ್ವಿಕೇರಿ, ಲೈಟ್‌ಹೌಸ್, ಸಾಂತಯ್ಯನಕೇರಿ ಪ್ರದೇಶಗಳಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿದೆ.

ತೀರದಲ್ಲಿ ಮೀನುಗಾರರು ನಿರ್ಮಿಸಿಕೊಂಡಿರುವ ಶೆಡ್‌ಗಳು ಕಡಲ ಪಾಲಾಗಿದ್ದು, ಬಲೆ ಮತ್ತಿತರ ಸಲಕರಣೆಗಳು ಕಡಲ ಒಡಲು ಸೇರಿಕೊಂಡಿದೆ. ಗುಜ್ಜಾಡಿ ಗ್ರಾಮದ ಬೆಣ್ಗೆರೆ ಪರಿಸರದಲ್ಲಿ ಕೂಡ ಕಡಲಿನ ಅಬ್ಬರ ಜೋರಾಗಿದ್ದು, ಸುಮಾರು 8-9 ಮನೆಗಳು ಅಪಾಯದಂಚಿನಲ್ಲಿದೆ.

ಕಡಲ್ಕೊರೆತ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ತಹಶೀಲ್ದಾರ್ ಆನಂದಪ್ಪ ನ್‌ಕಾ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News