ಮಂಗಳೂರು : ಟಗ್‌ನೌಕೆ ನೀರುಪಾಲು; ಐವರು ನಾಪತ್ತೆ

Update: 2021-05-15 16:06 GMT

ಮಂಗಳೂರು, ಮೇ 15: ತೌಕ್ತೆ ಚಂಡಮಾರುತವು ಕರಾವಳಿ ತೀರದಲ್ಲಿ ಭಾರೀ ಗಾಳಿಮಳೆಯಲ್ಲದೆ ಅರಬಿ ಸಮುದ್ರದಲ್ಲೂ ತನ್ನ ಆರ್ಭಟ ತೋರಿಸಿದೆ. ಅಂದರೆ ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ (ಸಿಂಗಲ್ ಪಾಯಿಂಟ್ ಮೂರಿಂಗ್-ಎಸ್‌ಪಿಎಂ) ನಿರ್ವಹಣೆ ಮಾಡುವವರ ಟಗ್‌ನೌಕೆಯೊಂದು ಶನಿವಾರ ನೀರುಪಾಲಾಗಿದೆ. ಈ ನೌಕೆಯಲ್ಲಿ 8 ಮಂದಿಯ ಪೈಕಿ ಐವರು ನಾಪತ್ತೆಯಾಗಿದ್ದರೆ, ಇಬ್ಬರನ್ನು ರಕ್ಷಿಸಲಾಗಿದೆ. ಒಬ್ಬರ ಮೃತದೇಹ ಪತ್ತೆಯಾಗಿದೆ.

ಮಂಗಳೂರಿನ ನವಮಂಗಳೂರು ಬಂದರ್‌ನಿಂದ ಸುಮಾರು 17 ನಾಟಿಕಲ್ ಮೈಲ್ ದೂರದಲ್ಲಿ ಅರಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ಬೃಹತ್ ತೈಲ ಹಡಗುಗಳಿಂದ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಟಗ್ ಮೂಲಕ ಹೊರಗುತ್ತಿಗೆಯ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅದರಂತೆ ಈ ಕೆಲಸ ಮಾಡಲು 8 ಮಂದಿಯ ತಂಡ ‘ಟಗ್ ಅಲಯನ್ಸ್’ ಎಂಬ ನೌಕೆಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ರಾತ್ರಿ ಸುಮಾರು 7ರ ವೇಳೆಗೆ ವಿದೇಶದಿಂದ ಬಂದ ತೈಲವನ್ನು ಟ್ಯಾಂಕರ್‌ನಿಂದ ಅನ್‌ಲೋಡಿಂಗ್ ಮಾಡಲಾಗಿದ್ದು, ಬಳಿಕ ಮರಳಬೇಕಿತ್ತು. ಆದರೆ ಈ ತಂಡವು ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಹೊರಟಿದೆ. ಬೆಳಗ್ಗೆ 9.45ರ ವರೆಗೂ ನವಮಂಗಳೂರು ಬಂದರ್‌ನೊಂದಿಗೆ ಸಂಪರ್ಕದಲ್ಲಿದ್ದ ಟಗ್ ಆ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ಸಂಜೆ ವೇಳೆಗೆ ಟಗ್‌ನ ಅವಶೇಷಗಳು ಪಡುಬಿದ್ರಿ ಬಳಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಸಮೀಪಲ್ಲೇ ಮೃತದೇಹವೊಂದು ಸಿಕ್ಕಿದೆ.

ಈ ಮಧ್ಯೆ ನಡೆಸಲಾದ ಕಾರ್ಯಾಚರಣೆಯಲ್ಲಿ ಉಡುಪಿ ಸಮೀಪದ ಮಟ್ಟು ಕೊಪ್ಪ ಎಂಬಲ್ಲಿಗೆ ಇಬ್ಬರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ದಡ ಸೇರಿ ಪಾರಾಗಿದ್ದಾರೆ. ಎಲ್ಲಾ ಕೆಲಸಗಾರರು ‘ಅಂಡರ್ ವಾಟರ್ ಸರ್ವಿಸಸ್’ ಎಂಬ ಸಂಸ್ಥೆಗೆ ಸೇರಿದ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ ಎಂದು ತಿಳದು ಬಂದಿದೆ.

ಎಂಆರ್‌ಪಿಎಲ್‌ನ ತೇಲುಜೆಟ್ಟಿ

ಸಾಮಾನ್ಯವಾಗಿ ಬೃಹತ್ ಗಾತ್ರದ ಹಡಗುಗಳಲ್ಲಿ ಕಚ್ಚಾ ಪೆಟ್ರೋಲಿಯಂ ಸಾಗಿಸಲಾಗುತ್ತದೆ. ಆ ಹಡಗಿಗೆ ಮಂಗಳೂರು ಬಂದರು ತಲುಪಲು ಆಳವಿಲ್ಲದ ಕಾರಣಕ್ಕೆ ತೇಲುಜೆಟ್ಟಿಯನ್ನು ಮಂಗಳೂರಿನ ಸಮುದ್ರದಲ್ಲಿ ನಿರ್ಮಿಸಲಾಗಿದೆ. ಅಲ್ಲಿ ತೈಲವನ್ನು ಇಳಿಸಿ ಹಡಗುಗಳು ಅಲ್ಲಿಂದಲೇ ತೆರಳುತ್ತವೆ. ಬಳಿಕ ಎಸ್‌ಪಿಎಂನಿಂದ ಬಂದರಿಗೆ ತೈಲವನ್ನು ಪೈಪ್‌ಲೈನ್ ಮೂಲಕ ಪಂಪ್ ಮಾಡಲಾಗುತ್ತದೆ. ಈ ತೈಲ ನಿರ್ವಹಣೆ ಮಾಡುವ ಕೆಲಸವನ್ನು ಖಾಸಗಿ ಕಂಪೆನಿಗಳಿಗೆ ಐದು ವರ್ಷಕ್ಕೊಮ್ಮೆ ಹೊರಗುತ್ತಿಗೆ ನೀಡಲಾಗುತ್ತಿದೆ. ಇದೀಗ ಕಾಕಿನಾಡ ಮೂಲದ ಕೆಇಆರ್‌ಎಸ್‌ಒಎಸ್ ಎಂಬ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಮತ್ತೊಂದು ಟಗ್ ಅಪಾಯದಲ್ಲಿ: 12 ಮಂದಿಯ ರಕ್ಷಣೆಗೆ ಕಾರ್ಯಾಚರಣೆ

ನವ ಮಂಗಳೂರು ಬಂದರಿಗೆ ಹಡಗುಗಳ ಆಗಮನ ಮತ್ತು ನಿರ್ಗಮನಕ್ಕೆ ಸಹಕರಿಸುವ ‘ಕೋರಮಂಡಲ್’ ಎಂಬ ಹೆಸರಿನ ಇನ್ನೊಂದು ಟಗ್ ಅರಬಿ ಸಮುದ್ರದಲ್ಲಿ ಬಂದರಿನ ಆ್ಯಂಕರೇಜ್‌ನಲ್ಲಿ ಶನಿವಾರ ಅಪಾಯಕ್ಕೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.

ಚಂಡಮಾರುತದ ಅಲೆಗಳ ಅಬ್ಬರಕ್ಕೆ ಟಗ್‌ನ ಆ್ಯಂಕರ್ ಕೂಡಾ ತುಂಡಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದೀಗ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ. ಇದರಲ್ಲಿದ್ದ 12 ಮಂದಿ ಸಿಬ್ಬಂದಿಯ ರಕ್ಷಣೆಗೆ ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ಮುಂದುವರಿಸಿದೆ.

ಕಂಟೈನರ್ ಹಡಗಿನಲ್ಲಿ ಅವಘಡ

ಮಂಗಳೂರು ಬಂದರ್‌ನಿಂದ ಹೊರಟಿದ್ದ ಕಂಟೈನರ್ ಹಡಗು ‘ಎಸ್‌ಎಸ್‌ಎಲ್ ಗಂಗಾ’ದ ಡೆಕ್‌ಗೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸಿದ ಪರಿಣಾಮ ಡೆಕ್ ಮೇಲಿದ್ದ ಸಿಬ್ಬಂದಿಯ ಪೈಕಿ ಒಬ್ಬರು ಸಮುದ್ರದಲ್ಲಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಲೆಗಳ ಹೊಡೆತಕ್ಕೆ ಸಿಬ್ಬಂದಿ ಗಂಭೀರ ಸ್ವರೂಪದ ಗಾಯಗೊಂಡಿದ್ದು ಹಡಗನ್ನು ಹಿಂದಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನಿಂದ ಸುಮಾರು 28 ನಾಟಿಕಲ್ ಮೈಲಿ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News