ವೆನ್ಲಾಕ್ ಆಸ್ಪತ್ರೆ ವೈದ್ಯರೊಂದಿಗೆ ಮುಖ್ಯಮಂತ್ರಿ ಸಂವಾದ

Update: 2021-05-15 16:20 GMT

ಮಂಗಳೂರು, ಮೇ 15: ಕೋವಿಡ್ 2ನೇ ಅಲೆಯು ನಿರೀಕ್ಷೆ ಮೀರಿ ಹರಡುತ್ತಿದ್ದು, ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದ ಮೇಲೆ ಕೆಲಸ ಕಾರ್ಯಗಳ ಒತ್ತಡ ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡುತ್ತಿರುವ ರಾಜ್ಯದ ಆಯ್ದ ಕೆಲವು ವೈದ್ಯಾಧಿಕಾರಿಗಳೊಂದಿಗೆ ಆನ್‌ಲೈನ್ ಸಂವಾದ ಆರಂಭಿಸಿದ್ದು, ಶನಿವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ.ಶರತ್ ಬಾಬು ಅವರೊಂದಿಗೆ ಸಂವಾದ ನಡೆಸಿದರು.

ಜೀವದ ಹಂಗು ತೊರೆದು ಮಾನವೀಯ ನೆಲೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನೀವೆಲ್ಲರೂ ನಾಡಿನ ಅಮೂಲ್ಯ ಆಸ್ತಿಯಾಗಿದ್ದೀರಿ. ಸರಕಾರ ನಿಮ್ಮೆಲ್ಲರ ಪರವಾಗಿರುತ್ತದೆ ಎಂದ ಮುಖ್ಯಮಂತ್ರಿ, ನಿಮ್ಮ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಕಡೆಯೂ ಗಮನಹರಿಸಿ ಎಂದರು.

ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 210 ಕೋವಿಡ್ ಸೋಂಕಿತರು ದಾಖಲಾಗಿದ್ದಾರೆ. 30 ಮಂದಿ ಐಸಿಯು ವಾರ್ಡ್‌ನಲ್ಲಿದ್ದಾರೆ. 1 ಹೆಚ್‌ಡಿಯು ವಾರ್ಡ್ ಮಾಡಲಾಗಿದೆ. ಇದರಲ್ಲಿ 50 ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಶರತ್ ಬಾಬು ವಿವರಿಸಿದರು.

ಆಕ್ಸಿಜನ್ ಮತ್ತು ರೆಮಿಡಿಸಿವರ್ ಲಭ್ಯತೆ ಬಗ್ಗೆ ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಡಾ. ಶರತ್ ಬಾಬು, ಜಿಲ್ಲೆಯಲ್ಲಿ ಇದುವರೆಗೆ ಆಕ್ಸಿಜಿನ್‌ನ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಬಳ್ಳಾರಿಯಿಂದ ಪ್ರತೀ 2 ದಿನಕ್ಕೊಮ್ಮೆ ಆಕ್ಸಿಜಿನ್ ಬರುತ್ತಿದೆ. ಮುಂಜಾಗ್ರತೆಯಾಗಿ ಜಂಭೋ ಸಿಲೆಂಡರ್‌ಗಳಲ್ಲಿ ಅಕ್ಸಿಜಿನ್ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ. ರೆಮಿಡಿಸಿವರ್ ಕೊರತೆಯಾಗಿಲ್ಲ, ಜಿಲ್ಲಾಡಳಿತದ ಆದೇಶದಂತೆ ರೆಮಿಡಿಸಿವರ್‌ನ್ನು ಜಿಲ್ಲಾ ತಜ್ಞರ ಸಮಿತಿಯು ಮಾರ್ಗಸೂಚಿ ಪ್ರಕಾರ ಬಳಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News