ಕಾಪುವಿನಲ್ಲಿ ಕಡಲ್ಕೊರೆತ: ಆತಂಕದಲ್ಲಿ ತೀರದ ನಿವಾಸಿಗಳು; ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ

Update: 2021-05-15 16:29 GMT

ಕಾಪು: ತೌಕ್ತೆ ಚಂಡಮಾರುತ ಪರಿಣಾಮ ಕಾಪು ತಾಲೂಕಿನ ಹೆಜಮಾಡಿಯ ಕೋಡಿ, ನಡಿಕುದ್ರು, ಪಡುಬಿದ್ರಿ ನಡಿಪಟ್ಣ, ಕಾಡಿಪಟ್ಣ, ತೆಂಕ, ಬಡಾ ಗ್ರಾಮದ ತೊಟ್ಟಂ, ಸುಭಾಷ್ ರೋಡ್, ಮೂಳೂರು, ಕಾಪು ಲೈಟ್‍ಹೌಸ್, ಮಟ್ಟು ತೀರ ಪ್ರದೇಶಗಳಲ್ಲಿ ಕಡಲು ಕೊರೆತ ಉಂಟಾಗಿದೆ.  ಈ ಪ್ರದೇಶಗಳ ಹಲವೆಡೆ ತೋಟ ಮನೆಗಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಈ ಭಾಗದಲ್ಲಿ ಹತ್ತಾರು ತೆಂಗಿನ ಮರಗಳು ಸಮುದ್ರದ ಪಾಲಾಗಿದ್ದು, ಇನ್ನೂ ಹಲವು ತೆಂಗಿನ ಮರಗಳು ಸಮದ್ರದ ಪಾಲಾಗುವ ಭೀತಿಯಲ್ಲಿವೆ.

ಕಾಪು ಲೈಟ್ ಹೌಸ್ ಸುತ್ತಲೂ ಸಮುದ್ರದ ನೀರು  ಆವರಿಸಿಕೊಂಡಿದೆ. ಈ ಪರಿಸರದ ಲೈಟ್ ಹೌಸ್ ವಾರ್ಡ್, ಕೋಟೆ ಕೊಪ್ಪಲ, ಸುಬ್ಬಯ್ಯ ತೋಟ, ಬೈರುಗುತ್ತು ತೋಟ, ಗರಡಿ ವಾರ್ಡ್, ಲಕ್ಷ್ಮೀ ನಗರ  ವ್ಯಾಪ್ತಿಯ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಸಮುದ್ರ ಹಾಗೂ ನದಿ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಪಡುಬಿದ್ರಿ ನಡಿಪಟ್ಣದಲ್ಲಿ ಕಡಲ್ಕೊರೆತಕ್ಕೆ ತಡೆಗೋಡೆ ಕಾಮಗಾರಿ ಅಪೂರ್ಣಗೊಳಿಸಿರುವ ಪರಿಣಾಮ ಬಾಕಿ ಉಳಿದ 50 ಮೀಟರ್ ವ್ಯಾಪ್ತಿಯಲ್ಲಿ ಅಲೆಗಳ ಅಬ್ಬರದಿಂದ ನೀರು ಬ್ಲೂಫ್ಲ್ಯಾಗ್ ಬೀಚ್ ಸಂಪರ್ಕಿಸುವ ರಸ್ತೆ ಮೇಲೆ ಅಪ್ಪಳಿಸುತ್ತಿದ್ದು, ರಸ್ತೆಗೆ ಹಾನಿಯಾಗಿವೆ. ಸುಮಾರು 100 ಮೀಟರ್ ಅಂತರದಲ್ಲಿ ಕಾಮಿನಿ ಹೊಳೆ ಹರಿಯುತ್ತಿದ್ದು, ಕಡಲು ಇನ್ನೂ ಬಿರುಸುಗೊಂಡಲ್ಲಿ ಸಮುದ್ರ ಹಾಗೂ ಹೊಳೆ ಸೇರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅಸಮಾಧಾನ: ಈ ಭಾಗದ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಪ್ರತೀ ಮಳೆಗಾಲದಲ್ಲೂ ಈ ಭಾಗದಲ್ಲಿ ನಾವು ಆತಂಕದಲ್ಲಿಯೇ ದಿನ ದೂಡಬೇಕಾಗುತ್ತದೆ. ಇಲ್ಲಿಯೇ ಸಮೀಪದಲ್ಲಿ ಕಾಮಿನಿ ನದಿ ಇದೆ. ಈ ನದಿ ಸಮುದ್ರ ಸೇರಿದಲ್ಲಿ ಹಲವು ಮನೆಗಳು ಸಮುದ್ರ ಪಾಲಾಗಲಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. 

ಅಸಮರ್ಪಕ ಕಾಮಗಾರಿ: ಬಡಾ ಗ್ರಾಮದ ತೊಟ್ಟಂ ಪ್ರದೇಶದಲ್ಲಿ ಏಡಿಬಿ ಯೋಜನೆಯ ಅಸಮರ್ಪಕ ತಡೆಗೋಡೆ ಕಾಮಗಾರಿಯಿಂದ ಸಮುದ್ರ ನೀರು ಒಳನುಗ್ಗುತ್ತಿದೆ. ಇಲ್ಲಿನ ಚಲ್ಲಪೂಜಾರಿ, ಲಕ್ಷ್ಮೀ ಬೆಲ್ಚಡ ಹಾಗೂ ಸಂಕಪ್ಪ ಪೂಜಾರಿ ಅವರ ಮನೆಯಂಗಳಕ್ಕೆ ನೀರು ನುಗ್ಗಿ ಸಂಕಷ್ಟವಾಗಿದೆ. ಅಸಮರ್ಪಕ ಕಾಮಗಾರಿ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು. 

ಶಾಸಕರ ಭೇಟಿ: ಕಡಲ್ಕೊರೆತ ಉಂಟಾದ ಕಾಪುವಿಗೆ ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿದರು.  ಕಾಪು ಬೀಚ್ ಮತ್ತು ಲೈಟ್ ಹೌಸ್ ವಾರ್ಡ್‍ನಲ್ಲಿ  ಸಮುದ್ರದಿಂದ ಉಕ್ಕಿದ ನೀರು ಎಲ್ಲೆಡೆ ಹರಿಯುತ್ತಿದೆ. ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದು ಕೊಳ್ಳಲಾಗಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಜನರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಗಂಜಿ ಕೇಂದ್ರಗಳ ಪ್ರಾರಂಭ: ಕಾಪು ಸುನಾಮಿ ಸೆಂಟರ್‍ನಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗಂಜಿ ಕೇಂದ್ರಗಳ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜನ ಹಾಗೂ ಜಾನುವಾರುಗಳ ರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು. ಜನರ ಪ್ರಾಣ ರಕ್ಷಣೆಗೆ ಪೂರಕವಾಗಿ ತೊಂದರೆಗೊಳಗಾದ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುವುದು ಎಂದು ಕಾಪು ತಹಸೀಲ್ದಾರ್ ಪ್ರತಿಭಾ ಆರ್. ತಿಳಿಸಿದರು.

ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಇಂಜಿನಿಯರ್ ಪ್ರತಿಮಾ, ಗಂಗಾಧರ್ ಸುವರ್ಣ, ನವೀನ್ ಅಮೀನ್, ಗ್ರಾಮ ಕಾರಣಿಕ ವಿಜಯ್ ಮೊದಲಾದವರು ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News