ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಭೇಟಿ: ತರಾಟೆಗೆ ತೆಗೆದುಕೊಂಡ ಸ್ಥಳೀಯರು

Update: 2021-05-15 16:33 GMT

ಪಡುಬಿದ್ರಿ: ನೀವು ಕಡಲ್ಕೊರೆತ ಉಂಟಾದಾಗ ಬಂದು ಹೋಗುತ್ತೀರಿ. ಮತ್ತೆ ಈಚೆ ಬರುವುದಿಲ್ಲ. ಇಲ್ಲಿ ಕಲ್ಲು ಹಾಕಿ ಎಂದು ವರ್ಷದಿಂದ ಹೇಳುತಿದ್ದೇವೆ. ಆದರೂ ಹಾಕಲಿಲ್ಲ. ಹೀಗೆಂದು ಪಡುಬಿದ್ರಿಯ ನಡಿಪಟ್ಣ ನಿವಾಸಿಗಳು ಕಡಲ್ಕೊರೆತ ಉಂಟಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಮೆಂಡನ್ ಅವರೊಂದಿಗೆ ಭೇಟಿ ನೀಡಿದಾಗ ಈ ರೀತಿ ತರಾಟೆಗೆ ತೆಗೆದುಕೊಂಡರು.

ಪಡುಬಿದ್ರಿಯ ನಡಿಪಟ್ಣದಲ್ಲಿ ಕಳೆದ ಭಾರಿಯ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾದಾಗ ಕಲ್ಲುಗಳನ್ನು ಅಳವಡಿಸಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕೆಲವೇ ಮೀಟರ್ ತಡೆಗೋಡೆ ನಿರ್ಮಾಣ ಮಾಡದೆ ಬಿಡಲಾಗಿತ್ತು. ಈ ಬಗ್ಗೆ ಕಳೆದ ಬಾರಿಯೇ ಶಾಶ್ವತ ತಡೆಗೋಡೆಯ ಬೇಡಿಕೆಯಿಟ್ಟಿದ್ದರೂ ಅದನ್ನು ಕಾಡಿಪಟ್ಣ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಸ್ಥಳೀಯರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕರೊಂದಿಗೆ ವಾಗ್ವಾದಕ್ಕೆ ಮುಂದಾದರು.

ಮೊಗವೀರ ಮುಂದಾಳು ಸುಕುಮಾರ ಶ್ರೀಯಾನ್ ಕೂಡಾ ಶಾಸಕ, ಸಂಸದರನ್ನು ಈ ಪ್ರದೇಶದಲ್ಲಿ ತಡೆಗೋಡೆ ರಚನೆ ಅನಿವಾರ್ಯ ಎಂಬು ದಾಗಿ ಮನವೊಲಿಸಿದರು. ಬೇಡಿಕೆಗೆ ಸ್ಪಂದಿಸಿದ ಶಾಸಕ ಲಾಲಾಜಿ ಮೆಂಡನ್ ಹಿಂದಿನ ಬಾರಿಯೂ ಮುಂಗಡ ಕಾಮಗಾರಿಯನ್ನು ಮಾಡಲಾ ಗಿದೆ. ಗುತ್ತಿಗೆದಾರರ ಪಾವತಿ ಇನ್ನಷ್ಟೇ ಆಗಬೇಕಿದೆ. ಸ್ಥಳದಲ್ಲಿದ್ದ ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ಕಾರ್ಯಕಾರಿ ಎಂಜೀನಿಯರ್ ಉದಯ್ ಅವರೊಂದಿಗೆ ಪ್ರಕೃತಿ ವಿಕೋಪ ಅನುದಾಡಿ ಸೇರಿಸಿಕೊಂಡು ತುರ್ತಾಗಿ ಸಮುದ್ರ ದಂಡೆಗೆ ಕಲ್ಲುಬಂಡೆಗಳನ್ನು ಪೇರಿಸಿಟ್ಟು ಈ ಭಾಗದ ಜನರ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.

ಸ್ಥಳಾಂತರಿಸಲು ಸೂಚನೆ: ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಭಾಗದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಪ್ರಭಾರ ಕಂದಾಯ ಪರಿವೀಕ್ಷಕ ವಿಜಯ್ ಅವರಿಗೆ ಸೂಚಿಸಿದರು. ಸಂಸದೆ ಹಾಗೂ ಶಾಸಕರು ಸಮುದ್ರದ ಅಬ್ಬರ ಅಲೆ ಹಾಗೂ ಬಿರುಸಿನ ಗಾಳಿ ಮಳೆಯ ಅನುಭವವನ್ನೂ ಇಲ್ಲಿ ಪ್ರತ್ಯಕ್ಷ ಕಾಣುವಂತಾಯಿತು. ಪಡುಬಿದ್ರಿ ಪಡುಹಿತ್ಲು ಪ್ರದೇಶಕ್ಕೂ ಭೇಟಿ ನೀಡಿ ಅಲ್ಲಿನ ಬೇಸಾಯದ ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ತೊಂದರೆ ಆಗಿರುವುದನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಪಿಡಿಒ ಪಂಚಾಕ್ಷರಿ ಸ್ವಾಮಿ, ಉಪಾಧ್ಯಕ್ಷೆ ಯಶೋದಾ, ವಿಷ್ಣುಮೂರ್ತಿ ಆಚಾರ್ಯ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ್ ದೇವಾಡಿಗ, ಗ್ರಾಮ ಸಹಾಯಕ ಜಯರಾಮ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News