×
Ad

ಭಟ್ಕಳದಲ್ಲಿ ಮೀನುಗಾರನನ್ನು ಬಲಿಪಡೆದ ತೌಕ್ತೆ ಚಂಡಮಾರುತ

Update: 2021-05-15 22:07 IST

ಭಟ್ಕಳ: ಹವಾಮಾನ ಇಲಾಖೆಯ ಮನ್ಸೂಚನೆಯಂತೆ ಶನಿವಾರ ಅಪ್ಪಳಿಸಿದ ತೌಕ್ತೆ ಚಂಡಮಾರುತ ಭಟ್ಕಳದಲ್ಲಿಯೂ ತನ್ನ ಪ್ರಭಾವ ತೋರಿಸಿದ್ದು ಓರ್ವ ಮೀನುಗಾರನ ಜೀವವನ್ನು ಬಲಿಪಡೆದುಕೊಂಡಿದೆ. 

ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿದ್ದ ತನ್ನ ದೋಣಿಯನ್ನು ದಡಕ್ಕೆ ತರಲೆಂದು ಸಮುದ್ರಕ್ಕೆ ಇಳಿದ ಮೀನುಗಾರನೊರ್ವ ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾನೆ.

ಜಾಲಿಕೋಡಿ ಸಮುದ್ರ ತೀರದಲ್ಲಿ ಶನಿವಾರ ಲಂಗುರ ಹಾಕಿದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ(60) ಮೃತರು. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು‘ಡೆಂಜರ್ ಝೋನ್’ಎಂದು ಘೋಷಿಸಲಾಗಿದೆ. 

ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನೆಗದ್ದೆ, ಹೆರ್ತಾರ್ ಗಳಲ್ಲಿ ನೆಲ ಕೊಚ್ಚಿ ಹೋಗುತ್ತಿದ್ದು, ತಟದಲ್ಲಿ ಬೆಳೆದು ನಿಂತಿರುವ ತೆಂಗಿನ ಮರಗಳಿಗೆ ಆಪತ್ತು ಬಂದೊದಗಿದೆ. ರಸ್ತೆಯೂ ಕಡಲ ಅಬ್ಬರಕ್ಕೆ ಕುಸಿಯುತ್ತಿದೆ.ತಾಲೂಕಿನ ಬಂದರು,ತಲಗೋಡ, ಕರಿಕಲ್,ಜಾಲಿ, ರ್ಗೊಟೆ, ಬೆಳಕೆ ಹಾಗೂ ಇತರೆ ಭಾಗಗಳಲ್ಲಿ ಸಮುದ್ರ ಕೊರೆತಉಂಟಾಗಿ ಅಲ್ಲಿಯ ಜನರಿಗೆ ಸಂಕಟವನ್ನು ತಂದಿಟ್ಟಿದೆ. ನೀರು ಒಂದೇ ಸವನೆ ತಡೆಗೋಡೆಯನ್ನು ದಾಟಿ ಮೇಲಕ್ಕೆ ಹರಿಯಲಾರಂಭಿಸಿದೆ.

ಅರಬ್ಬಿ ಸಮುದ್ರದ ತೀರದಲ್ಲಿ ನಿನ್ನೆಯಿಂದಲೇ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ತೌಕ್ತೆ ಚಂಡಮಾರುತದ ಪರಿಣಾಮ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿರುವವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರ ತೀರಕ್ಕೆ ಮರಳಿ ಹೋಗುವಂತೆ ಸೂಚಿಸಿದ್ದರು. ಈ ಹಿನ್ನಲೆ ಯಲ್ಲಿ ಭಟ್ಕಳ  ವ್ಯಾಪ್ತಿಯ ಎಲ್ಲಾ ಸಮುದ್ರ ತೀರಗಳಿಗೆ ತಹಶಿಲ್ದಾರರ ರವಿಚಂದ್ರನ್ ಕಂದಾಯ ಅಧಿಕಾರಿಗಳು,ಜಾಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರಳಿ ತೀರದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ವಿದ್ಯುತ್ ಕಂಬಗಳು ಧರೆಗೆ; ಹೆಸ್ಕಾಂ ಇಲಾಖೆಗೆ ಲಕ್ಷಾಂತ ರೂ ನಷ್ಟ; ಮಳೆಗಾಳಿಗೆ 4 ವಿದ್ಯುತ್ ಟ್ರಾನ್ಸರ್ಪಾಮರ್ಸ್ ಮತ್ತು 13 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು 4.48ಲಕ್ಷ ರೂ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾರಿಬಿದ್ದ ಮನೆ ಛಾವಣಿ: ಬಿರುಗಾಳಿಯಿಂದಾಗಿ ಇಲ್ಲಿನ ಆಝಾದ್ ನಗರ 8ನೇ ಕ್ರಾಸ್ ನಲ್ಲಿರು ಶೇಡಕುಳಿ ಹೊಂಡ ಎಂಬಲ್ಲಿ ಝಾಕಿರುನ್ನಿಸಾ ಮತ್ತು ಝೈಬುನ್ನಿಸಾ ಎಂಬುವವರ ಮನೆಯ ಮೇಲ್ಛವಾಣಿ ಹಾರಿ ಬಿದ್ದಿದ್ದು  80 ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಮ್ಮದ್ ಮುನೀರ್ ಮಾಹಿತಿ ನೀಡಿದ್ದು ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಮಸ್ಕತ್ ಕಾಲನಿಯಲ್ಲಿ ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದಿದ್ದು ಪಿ.ಎಪ್.ಐ ನ ಆಪತ್ತು ರಕ್ಷಣ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News