ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಅಂಗಾರ ಭೇಟಿ

Update: 2021-05-15 16:54 GMT

ಉಳ್ಳಾಲ : ವಾಯುಭಾರ ಕುಸಿತಕ್ಕೆ ತಲ್ಲಣಗೊಂಡಿರುವ ಸೋಮೇಶ್ವರದ ಹಿಂದು ರುದ್ರಭೂಮಿ‌, ಸೋಮೇಶ್ವರ ಮೋಹನ್ ಹಾಗೂ ಹೇಮಚಂದ್ರ ಅವರ ಮನೆ, ಉಚ್ಚಿಲದ ರೋಹಿತ್ ಮಾಸ್ಟರ್, ನಾಗೇಶ್ ಉಚ್ಚಿಲ್, ರೂಪೇಶ್ ಉಚ್ವಿಲ್ ಹಾಗೂ ಕಡಪ್ಪರ ಫ್ರೆಂಡ್ಸ್ ಕ್ಲಬ್ ಹಾಗೂ ಬೆಟ್ಟಂಪಾಡಿ ಎಂಡ್ ಪಾಯಿಂಟ್ ಬಳಿಗೆ ಶನಿವಾರ ತೆರಳಿದ ಸಚಿವ ಅಂಗರ ಅವರು ಸ್ಥಳೀಯರು, ಪಕ್ಷದ ಮುಖಂಡರು, ಅಧಿಕಾರಿಗಳ, ಸಂತ್ರಸ್ತರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅದರಂತೆ ತುರ್ತು ಅಗತ್ಯ ಇರುವ ಸೋಮೇಶ್ವರದ ಹೇಮಚಂದ್ರ ಹಾಗೂ ನೋಹನ್ ಅವರ ಮನೆ ಬಳಿ, ಉಚ್ಚಿಲ ರೋಹಿತ್ ಮಾಸ್ಟರ್ ಹಾಗೂ ರೂಪೇಶ್ ಉಚ್ಚಿಲ್, ನಾಗೇಶ್ ಉಚ್ವಿಲ್ ಅವರ ಮನೆ ಬಳಿ ಸದ್ಯಕ್ಕೆ ಮನೆ ರಕ್ಷಿಸಲು ಕಾಮಗಾರಿ ನಡೆಸುವಂತೆ ಸೂಚಿಸಿದರು.

ಈಗಾಗಲೇ ಈ ಭಾಗದಲ್ಲಿ ವಾಯುಭಾರ ಕುಸಿತದಿಂದಾದ ಅನಾಹುತದ ಬಗ್ಗೆ ಮಾಹಿತಿ ಪಡೆದಿದ್ದು ಅಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚಿಸು ತ್ತೇನೆ, ಹಂತಹಂತವಾಗಿ ಕಾಮಗಾರಿ ನಡೆಸುವುದಾದರೂ ತುರ್ತು ಅವಶ್ಯ ಇದ್ದಲ್ಲಿಗೆ ತಕ್ಷಣ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಎಚ್ಚರಿಸುತ್ತೇನೆ ಎಂದರು.

ಸಚಿವರ ಜೊತೆಯಲ್ಲಿ ಬಂದರು ಹಾಗೂ ಮೀನುಗಾರಿಕೆ ಅಧಿಕಾರಿಗಳು, ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್, ಕ್ಷೇತ್ರ ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಶಂಕರ್ ಹಾಗೂ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ಜೊತೆಗಿದ್ದರು. 

''ವಾಯುಭಾರ ಕುಸಿತಕ್ಕೆ ಉಚ್ಚಿಲ ಬೆಟ್ಟಂಪಾಡಿ ಪ್ರದೇಶದಲ್ಲಿ ನೆರೆ ನೀರು ತುಂಬಿದ ಪ್ರದೇಶದ ಸುಮಾರು ನಲ್ವತ್ತು ಮನೆ ಮಂದಿಯನ್ನು ಸೂಕ್ತ ವ್ಯವಸ್ಥೆ ಮಾಡಿ ಸ್ಥಳಾಂತರಿಸಲಾಗಿದೆ.''
- ವಾಣಿ ವಿ.ಆಳ್ವ, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News