ಗೋವಾ: ಆಮ್ಲಜನಕ ಅಭಾವದಿಂದ ಮತ್ತೆ 8 ಮಂದಿ ಕೊರೋನ ಸೋಂಕಿತರು ಮೃತ್ಯು

Update: 2021-05-16 03:42 GMT

ಪಣಜಿ : ಗೋವಾದಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್-19 ರೋಗಿಗಳ ಸಾವಿನ ಸರಣಿ ಮುಂದುವರಿದಿದ್ದು, ಶನಿವಾರ ಮತ್ತೆ ಎಂಟು ಮಂದಿ ಕೊನೆಯುಸಿರೆಳೆದಿದ್ದಾರೆ. ಇದರಿಂದ ಗೋವಾದ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಲ್ಲಿ 83 ಮಂದಿ ಆಮ್ಲಜನಕ ಅಭಾವದಿಂದ ಜೀವ ಕಳೆದುಕೊಂಡಂತಾಗಿದೆ.

ಗೋವಾ ಮೆಡಿಕಲ್ ಕಾಲೇಜಿನ ವೈದ್ಯರು ಇದನ್ನು ನೇರವಾಗಿ ಆಮ್ಲಜನಕ ಅಭಾವದಿಂದಾದ ಸಾವು ಎಂದು ದೃಢಪಡಿಸಲು ನಿರಾಕರಿಸಿದ್ದರೂ, ನರ್ಸ್‌ಗಳು, ರೋಗಿಗಳ ಸಂಬಂಧಿಕರು ಮತ್ತು ಸ್ವಯಂಸೇವಕರು ಇದನ್ನು ಆಮ್ಲಜನಕದ ಅಭಾವದಿಂದಾದ ಸಾವು ಎಂದು ದೃಢಪಡಿಸಿದ್ದಾರೆ. ಕೃತಕ ಉಸಿರಾಟ ವ್ಯವಸ್ಥೆಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕ ಕಡಿಮೆಯಾಗಿದ್ದನ್ನು ರಾತ್ರಿಯಿಡೀ ಗಮನಿಸದೇ ಇದ್ದುದೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.

"ರೋಗಿಗಳು ಮೃತಪಟ್ಟಿರುವುದಕ್ಕೆ ಇಂಥದ್ದೇ ಕಾರಣ ಎಂದು ನೇರವಾಗಿ ಹೇಳಲಾಗದು. ಬಹುತೇಕ ರೋಗಿಗಳು ಕೋವಿಡ್ ನ್ಯುಮೋನಿಯಾ ದಿಂದ ಮೃತಪಟ್ಟಿದ್ದಾರೆ. ಆಮ್ಲಜನಕ ಕೋವಿಡ್ ಚಿಕಿತ್ಸೆಯ ಪ್ರಮುಖ ಭಾಗ" ಎಂದು ಜಿಎಂಸಿ ಡೀನ್ ಡಾ.ಎಸ್.ಎಂ.ಬಂಡೇಕರ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಆಮ್ಲಜನಕ ಪೈಪ್‌ಲೈನ್‌ನಲ್ಲಿ ಉಂಟಾದ ಆಮ್ಲಜನಕ ಕೊರತೆಯಿಂದ 13 ವಾರ್ಡ್‌ಗಳಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಿವುದು ಆಸ್ಪತ್ರೆಯ ಲಾಗ್ ಪುಸ್ತದಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. 143ನೇ ವಾರ್ಡ್‌ನಲ್ಲಿ 90 ನಿಮಿಷ ಕಾಲ ಆಮ್ಲಜನಕ ಪೂರೈಕೆ ತೀರಾ ಕಡಿಮೆ ಇತ್ತು. ಆದಾಗ್ಯೂ ಆಮ್ಲಜನಕ ಸಿಲಿಂಡರ್‌ಗಳನ್ನು ಸಕಾಲಕ್ಕೆ ಪೂರೈಸಿದ್ದರಿಂದ ಹೆಚ್ಚಿನ ಸಾವು ನೋವು ತಪ್ಪಿಸಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News