ಐದು ರಾಜ್ಯಗಳಲ್ಲಿ ತೌಕ್ತೆ ಪ್ರತಾಪ: ಕೇರಳದಲ್ಲಿ ಇಬ್ಬರು ಮೃತ್ಯು

Update: 2021-05-16 04:00 GMT

ಹೊಸದಿಲ್ಲಿ: ವಿನಾಶಕಾರಿ ತೌಕ್ತೆ ಚಂಡಮಾರುತ ಕೇರಳದಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿ ಉತ್ತರಮುಖಿಯಾಗಿ ಮುಂದುವರಿದಿದ್ದು, ತೀವ್ರಗೊಂಡಿರುವ ಚಂಡಮಾರುತ ಮಂಗಳವಾರದ ವೇಳೆಗೆ ಗುಜರಾತ್‌ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಗುಜರಾತ್ ಮತ್ತು ಡಿಯು ಕರಾವಳಿ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಚಂಡಮಾರುತದ ಪರಿಣಾಮವಾಗಿ ರವಿವಾರದವರೆಗೆ ಕೇರಳ, ಕರ್ನಾಟಕ ಮತ್ತು ಗೋವಾದ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ರವಿವಾರ ಮಧ್ಯಾಹ್ನದ ಬಳಿಕ ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಕೇರಳದಲ್ಲಿ ಚಂಡಮಾರುತದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, ಎರ್ನಾಕುಲಂ ಹಾಗೂ ಕೋಝಿಕ್ಕೋಡ್‌ನಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ವ್ಯಾಪಕ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳಿಗೆ ಹಾನಿಯಾಗಿದೆ. ಮರಗಳು ಉರುಳಿವೆ. ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. 38 ಮನೆಗಳು ಹಾನಿಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಸರಗೋಡು ಸೇರಿದಂತೆ ಕೇರಳದ ಒಂಬತ್ತು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

"ತೌಕ್ತೆ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಂಡು, ಉತ್ತರ ದಿಕ್ಕಿನಲ್ಲಿ ಚಲಿಸಿ ಮೇ 18ರಂದು ಮುಂಜಾನೆ ವೇಳೆಗೆ ಗುಜರಾತ್ ತಲುಪಿ, ಸಂಜೆ ವೇಳೆಗೆ ಪೋರಬಂದರ್ ಮತ್ತು ನಾಲಿಯಾ ಪ್ರದೇಶವನ್ನು ದಾಟಲಿದೆ" ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಐದು ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ 50ಕ್ಕೂ ಹೆಚ್ಚು ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಮುನ್ನೆಚ್ಚರಿಕೆ ಕ್ರಮನವಾಗಿ ಪಶ್ಚಿಮ ರೈಲ್ವೆ 56 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯಗಳು ವಿಕೋಪ ಪರಿಸ್ಥಿತಿ ಎದುರಿಸಲು ಮಾಡಿಕೊಂಡ ಸಿದ್ಧತೆಗಳ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News