ಮೊಟ್ಟೆ ಕಳವು ಆರೋಪದಲ್ಲಿ ಪೊಲೀಸ್ ಸಿಬ್ಬಂದಿ ಅಮಾನತು

Update: 2021-05-16 04:16 GMT

ಚಂಡೀಗಢ: ವಾಹನದಟ್ಟಣೆಯ ರಸ್ತೆಯಲ್ಲಿ ನಿಲ್ಲಿಸಿದ್ದ ಗಾಡಿಯಿಂದ ಪೊಲೀಸ್ ಪೇದೆಯೊಬ್ಬ ಸಮವಸ್ತ್ರದಲ್ಲಿದ್ದುಕೊಂಡೇ ಮೊಟ್ಟೆ ಕದಿಯುತಿದ್ದಾನೆ ಎನ್ನಲಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೊಟ್ಟೆ ಕಳವು ಆರೋಪದಲ್ಲಿ ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾನೆ.

ಪ್ರಿತ್‌ಪಾಲ್ ಸಿಂಗ್ ಎಂಬ ಪೊಲೀಸ್ ಪೇದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೊಟ್ಟೆ ಸಾಗಿಸುವ ಗಾಡಿಯಿಂದ ಮೊಟ್ಟೆಗಳನ್ನು ಸಮವಸ್ತ್ರದ ಜೇಬಿನಲ್ಲಿ ತುಂಬಿಸಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಮೊಬೈಲ್ ಫೋನ್‌ನಲ್ಲಿ ಈ ದೃಶ್ಯದ ವೀಡಿಯೊ ಚಿತ್ರೀಕರಿಸಲಾಗಿದ್ದು, ಗಾಡಿಯ ಮಾಲಕ ಗಾಡಿಯ ಸಮೀಪಕ್ಕೆ ಬರುತ್ತಿದ್ದಂತೆ ಗಡಿಬಿಡಿಯಿಂದ ಪೊಲೀಸ್ ಪೇದೆ ರಸ್ತೆಯ ಇನ್ನೊಂದು ಮಗ್ಗುಲಿಗೆ ದಾಟುತ್ತಿರುವ ದೃಶ್ಯವೂ ಸೆರೆಯಾಗಿದೆ. ಬಳಿಕ ಪೊಲೀಸ್, ಆಟೊರಿಕ್ಷಾವೊಂದನ್ನು ತಡೆದು ನಿಲ್ಲಿಸಿ ಮೊಟ್ಟೆಯೊಂದಿಗೆ ಪರಾರಿಯಾಗಿದ್ದ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಿತ್‌ಪಾಲ್‌ನನ್ನು ಅಮಾನತುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಫತೇಘರ್ ಸಾಹಿಬ್ ಠಾಣೆಯ ಪೇದೆ ಪ್ರಿತ್‌ಪಾಲ್ ಸಿಂಗ್ ಗಾಡಿಯಿಂದ ಮೊಟ್ಟೆ ಕದಿಯುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕದ್ದ ಮೊಟ್ಟೆಯನ್ನು ಸಮವಸ್ತ್ರದ ಪ್ಯಾಂಟ್‌ನ ಜೇಬಿನಲ್ಲಿ ತುಂಬಿಸಿಕೊಳ್ಳುತ್ತಿರುವುದು ಸೆರೆಯಾಗಿದೆ. ಆತನನ್ನು ಅಮಾನತುಪಡಿಸಿ ಇಲಾಖಾ ವಿಚಾರಣೆ ಆರಂಭಿಸಲಾಗಿದೆ" ಎಂದು ಪಂಜಾಬ್ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News