ಮಂಗಳೂರು : ಮುಳುಗಿದ ಟಗ್‌ನೌಕೆ ; ನಾಪತ್ತೆಯಾದ ನಾಲ್ವರಿಗಾಗಿ ಮುಂದುವರಿದ ಶೋಧ

Update: 2021-05-16 05:51 GMT

ಮಂಗಳೂರು, ಮೇ 16:  ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬಿ ಸಮುದ್ರದಲ್ಲಿ ಮುಳುಗಡೆಯಾದ ಟಗ್ ನೌಕೆಯಲ್ಲಿದ್ದು ನಾಪತ್ತೆಯಾಗಿದ್ದ ನಾಲ್ವರಿಗಾಗಿ ರವಿವಾರವೂ ಶೋಧಕಾರ್ಯ ಮುಂದುವರಿದಿದೆ‌. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರನ್ನು ರಕ್ಷಿಸಲಾಗಿದೆ. ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ (ಸಿಂಗಲ್ ಪಾಯಿಂಟ್ ಮೂರಿಂಗ್-ಎಸ್‌ಪಿಎಂ) ನಿರ್ವಹಣೆ ಮಾಡುವವರ ಟಗ್‌ನೌಕೆಯಲ್ಲಿ ಒಟ್ಟು 8 ಮಂದಿ ಸಿಬ್ಬಂದಿಗಳಿದ್ದರು.

ಎಂಆರ್‌ಪಿಎಲ್‌ಗೆ ಸೇರಿದ್ದ ಈ ನೌಕೆಯ ಮೂಲಕ ಮಂಗಳೂರಿನ ನವಮಂಗಳೂರು ಬಂದರ್‌ನಿಂದ ಸುಮಾರು 17 ನಾಟಿಕಲ್ ಮೈಲ್ ದೂರದಲ್ಲಿ ಅರಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ಬೃಹತ್ ತೈಲ ಹಡಗುಗಳಿಂದ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಟಗ್ ಮೂಲಕ ಹೊರಗುತ್ತಿಗೆಯ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅದರಂತೆ ಈ ಕೆಲಸ ಮಾಡಲು 8 ಮಂದಿಯ ತಂಡ ‘ಟಗ್ ಅಲಯನ್ಸ್’ ಎಂಬ ನೌಕೆಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ರಾತ್ರಿ ಸುಮಾರು 7ರ ವೇಳೆಗೆ ವಿದೇಶದಿಂದ ಬಂದ ತೈಲವನ್ನು ಟ್ಯಾಂಕರ್‌ನಿಂದ ಅನ್‌ಲೋಡಿಂಗ್ ಮಾಡಲಾಗಿದ್ದು, ಬಳಿಕ ರಾತ್ರಿಯೇ ಮರಳಬೇಕಿತ್ತು. ಆದರೆ ಈ ತಂಡವು ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಹೊರಟಿದ್ದು, ಬೆಳಗ್ಗೆ 9.45ರ ವರೆಗೂ ನವಮಂಗಳೂರು ಬಂದರ್‌ನೊಂದಿಗೆ ಸಂಪರ್ಕದಲ್ಲಿತ್ತು. ಆದರೆ ಈ ಟಗ್‌ನೌಕೆಯು ಬಳಿಕ ಸಂಪರ್ಕ ಕಡಿದುಕೊಂಡಿತ್ತು. ಸಂಜೆ ವೇಳೆಗೆ ಟಗ್‌ನ ಅವಶೇಷಗಳು ಪಡುಬಿದ್ರಿ ಬಳಿ ಪತ್ತೆಯಾಗಿತ್ತು. ಅಲ್ಲೇ ಒಬ್ಬ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಬಳಿಕ ನಡೆಸಲಾದ ಕಾರ್ಯಾಚರಣೆಯಲ್ಲಿ ಉಡುಪಿ ಸಮೀಪದ ಮಟ್ಟು ಕೊಪ್ಪ ಎಂಬಲ್ಲಿ ಮೂವರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಮೂವರು ಲೈಫ್ ಜಾಕೆಟ್ ಧರಿಸಿದ್ದರಿಂದ ದಡ ಸೇರಿ ಪಾರಾಗಿದ್ದಾರೆ. ಈ ಎಲ್ಲಾ ಕೆಲಸಗಾರರು ‘ಅಂಡರ್ ವಾಟರ್ ಸರ್ವಿಸಸ್’ ಎಂಬ ಸಂಸ್ಥೆಗೆ ಸೇರಿದ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News