ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಅಪಾರ ನಷ್ಟ: ಡಿಸಿ ಜಿ.ಜಗದೀಶ್

Update: 2021-05-16 06:51 GMT

ಉಡುಪಿ, ಮೇ 16: ಚಂಡಮಾರುತದ ಪ್ರಭಾವ ಜಿಲ್ಲೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಇದರಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಬಹಳ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 36 ಮನೆಗಳಿಗೆ ಹಾನಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ತೌಕ್ತೆ ಚಂಡಮಾರುತದಿಂದ ಹಾನಿಗೀಡಾಗಿರುವ ಮಲ್ಪೆ ಪಡುಕೆರೆ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಸುಮಾರು 60 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದ್ದು, ಅದರಂತೆ ಅವರೆಲ್ಲರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ತೊಂದರೆಗೀಡಾಗುವ ಕುಟುಂಬಗಳಿಗೆ ಇಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಸದ್ಯ ಈ ಕೇಂದ್ರಗಳಲ್ಲಿ ಯಾರು ಕೂಡ ಉಳಿದುಕೊಂಡಿಲ್ಲ ಎಂದು ಅವರು ಹೇಳಿದರು.

ಚಂಡಮಾರುತದಿಂದ ಜಿಲ್ಲೆಯಲ್ಲಿ ಒಂದು ಜೀವಹಾನಿಯಾಗಿದ್ದು. ಅದರ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದು ಬಿಟ್ಟು ಈ ಚಂಡಮಾರುತದಿಂದ ಯಾವುದೇ ಜೀವಹಾನಿಯಾಗದಂತೆ ನೋಡಿಕೊಳ್ಳಲಾಗಿದೆ ಮತ್ತು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳ ತಂಡ ಭೇಟಿ

ಹಾನಿಗೀಡಾಗಿರುವ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳ ನಷ್ಟ ಅಂದಾಜು ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಬಹಳ ಕಡೆಗಳಲ್ಲಿ ಮೀನುಗಾರಿಕಾ ರಸ್ತೆಗಳು ಹಾನಿಗೀಡಾಗಿದ್ದು, ಈ ರಸ್ತೆಗಳ ಹಾನಿ ಪ್ರಮಾಣವನ್ನು ಸಂಜೆಯೊಳಗೆ ತಿಳಿಸು ವಂತೆ ಬಂದರು ಮತ್ತು ಮೀನು ಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅದೇ ರೀತಿ ಜಿಲ್ಲೆಯಾದ್ಯಂತ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳಿಗೆ ಹಾನಿಯಾಗಿ ಮೆಸ್ಕಾಂಗೆ ಸಾಕಷ್ಟು ನಷ್ಟ ಉಟಾಗಿದೆ. ಅದನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಆರು ಕೋಟಿ ಹಣವನ್ನು ಮೆಸ್ಕಾಂಗೆ ನೀಡಲಾಗಿದೆ. ಈ ಬಾರಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಕೂಡ ಸಾಕಷ್ಟು ಹಾನಿಯಾಗಿವೆ. ಕಡಲು ಕೊರತೆಯಿಂದ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಈ ಕುರಿತು ನಷ್ಟ ಅಂದಾಜು ಮಾಡುವಂತೆ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಕೆಲವು ಬೋಟುಗಳಿಗೆ ಹಾನಿ

ಮೀನುಗಾರಿಕಾ ಬೋಟುಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಅದನ್ನು ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಮ್ಮಲ್ಲಿ ಆಳ ಸಮುದ್ರ ಮೀನುಗಾರಿಕೆ ತೆರಳಿದ ಯಾರು ಕೂಡ ಸಮುದ್ರ ಮಧ್ಯೆ ಸಿಲುಕಿಕೊಂಡಿಲ್ಲ. ಮಂಗಳೂರು ಬೋಟು ದುರಂತದಲ್ಲಿ ಈಜಿಕೊಂಡು ಬಂದ ಮೂವರನ್ನು ಜಿಲ್ಲೆಯಲ್ಲಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳು ಪಡುಕೆರೆಯ ವೀರಾಂಜನೆಯ ಭಜನಾ ಮಂದಿರ ಸಮೀಪ ಹಾಗೂ ಶಾಂತಿ ನಗರ ಬೀಚ್‌ಗೆ ತೆರಳಿ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆಯವರೆಗೂ ರೆಡ್ ಅಲರ್ಟ್

ನಿನ್ನೆ ಜಿಲ್ಲೆಗೆ ಅಪ್ಪಳಿಸಿರುವ ಚಂಡಮಾರುತ ಇಂದು ಗೋವಾ ದಾಟಿ ಮಹಾ ರಾಷ್ಟ್ರ ರಾಜ್ಯ ಪ್ರವೇಶಿಸಿದೆ. ಆದರೂ ಜಿಲ್ಲೆಯಲ್ಲಿ ಇಂದು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಇಂದು ಸಂಜೆಯವರೆಗೆ ರೆಡ್ ಅಲರ್ಟ್ ಇದ್ದು, ನಾಳೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೆಲವು ಕಡೆಗಳಲ್ಲಿ ಭಾರೀ ಮಳೆಯಾ ಗುವ ಸಾಧ್ಯತೆ ಇದೆ. ಈ ಸಂಬಂಧ ಅಧಿಕಾರಿಗಳನ್ನು ಅಲರ್ಟ್ ಇಟ್ಟಿದ್ದೇವೆ. ಯಾವುದೇ ಹಾನಿ ಸಂಭವಿಸಿದರೆ ಕೂಡಲೇ ವರದಿ ಮಾಡಬೇಕು ಮತ್ತು ಜನರ ರಕ್ಷಣೆಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News