ಉಪ್ಪಿನಂಗಡಿ: ವಿವಾಹಿತ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ; ದೂರು

Update: 2021-05-16 07:36 GMT

ಉಪ್ಪಿನಂಗಡಿ: ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣವೊಂದು 34 ನೆಕ್ಕಿಲಾಡಿಯಲ್ಲಿ ನಡೆದಿದ್ದು, ಈ ಬಗ್ಗೆ ಆಕೆಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ದರ್ಬೆ ನಿವಾಸಿ ಸುರೇಶ್ ಪ್ರಭು ಆರೋಪಿ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾನಸಿಕ ಅಸ್ವಸ್ಥೆ ಹಾಗು ಆಕೆಯ ತಾಯಿ ಮೂಲತಃ ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾಗಿದ್ದು, 34 ನೆಕ್ಕಿಲಾಡಿಯ ಬಳಿ ಬಾಡಿಗೆ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ವಾಸ್ತವ್ಯವಿದ್ದರು. ಇವರ 44ರ ಹರೆಯದ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, ಅವರ ಪತಿ ಗುಜರಾತ್‍ನಲ್ಲಿದ್ದಾರೆ. ಕಳೆದ 10 ತಿಂಗಳ ಹಿಂದೆ ಪತಿ ಗುಜರಾತ್‍ಗೆ ತೆರಳಿದ್ದು, ಆ ಬಳಿಕ ಇಲ್ಲಿಗೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಕಳೆದ ಮೇ 12ರಂದು ಇವರ ಮನೆಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಭೇಟಿ ನೀಡಿದ್ದು, ಈ ಸಂದರ್ಭ ಸಂಶಯ ಬಂದು ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದಾಗ ಈಕೆ ಏಳು ತಿಂಗಳ ಗರ್ಭಿಣಿಯೆಂದು ದೃಢವಾಗಿದೆ. ಬಳಿಕ ಈಕೆಯ  ತಾಯಿ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳ ಮೇಲೆ ದರ್ಬೆಯ ಸುರೇಶ್ ಪ್ರಭು ಎಂಬಾತ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದಾನೆ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News