ಇಸ್ರೇಲ್‌ ಹಕ್ಕಿಗೆ ʼಬಲವಾದ ಬೆಂಬಲʼ ಸೂಚಿಸಿದ ಅಮೆರಿಕಾ ಅಧ್ಯಕ್ಷ ಬೈಡನ್ :‌ ದೂರವಾಣಿ ಮೂಲಕ ನೆತನ್ಯಾಹು ಜೊತೆ ಸಂಭಾಷಣೆ

Update: 2021-05-16 07:39 GMT

ವಾಷಿಂಗ್ಟನ್:‌ ಇಸ್ರೇಲ್‌ ಗಾಝಾ ವಿರುದ್ಧ ಹಲವಾರು ರಾಕೆಟ್‌ ಗಳನ್ನು ಉಡ್ಡಯನ ಮಾಡುತ್ತಿದ್ದು, ಹಲವಾರು ಜೀವಗಳು ಬಲಿಯಾಗಿವೆ. ಈ ನಡುವೆ ಗಾಝಾದಿಂದ ಹಮಾಸ್‌ ಕೂಡಾ ಇಸ್ರೇಲ್‌ ಗುರಿಯಾಗಿಸಿ ರಾಕೆಟ್‌ ದಾಳಿ ನಡೆಸಿತ್ತು. ಈ ಕುರಿತಾದಂತೆ  ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಫೆಲೆಸ್ತೀನ್‌ ನ ಅಧ್ಯಕ್ಷ ಮುಹಮ್ಮದ್‌ ಅಬ್ಬಾಸ್ ಜೊತೆ ದೂರವಾಣಿ ಮಾತುಕತೆ ನಡೆಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಅಬ್ಬಾಸ್‌ ರವರಿಗೆ ಪ್ರತ್ಯೇಕವಾಗಿ, "ಹಮಾಸ್‌ ರಾಕೆಟ್‌ ಹಾರಿಸುವುದನ್ನು ನಿಲ್ಲಿಸಬೇಕು" ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇಸ್ರೇಲ್‌ ನಡೆಸುತ್ತಿರುವ ಹಿಂಸಾಚಾರದ 6ನೇ ದಿನದಂದು ಕರೆ ಮಾಡಿ ಮಾತನಾಡಿದ ಬೈಡನ್, ಹಮಾಸ್‌ ಮತ್ತು ಇತರ ಉಗ್ರ ಗುಂಪುಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ ಗಿದ್ದು, ಇದಕ್ಕೆ ನಮ್ಮ ಬಲವಾದ ಬೆಂಬಲವಿದೆ ಎಂದು ಅವರು ಹೇಳಿದ್ದಾರೆಂದು ತಿಳಿದು ಬಂದಿದೆ. ಎರಡೂ ಕಡೆಗಳಲ್ಲಿ ನಡೆಯುತ್ತಿರುವ ಸಾವುನೋವುಗಳ ಕುರಿತು ತಮಗೆ ಕಾಳಜಿಯಿದೆ ಎಂದೂ ಅವರು ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ.

"ಇಸ್ರೇಲ್‌ ನಾದ್ಯಂತ ಪಟ್ಟಣಗಳು ಮತ್ತು ನಗರಗಳ ವಿರುದ್ಧದ ದಾಳಿಯನ್ನು ಬೈಡನ್ ಖಂಡಿಸಿದ್ದಾರೆ" ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಎರಡೂ ದೇಶಗಳ ನಡುವೆ ಸೂಕ್ತ ಪರಿಹಾರವನ್ನು ಕೈಗೊಳ್ಳುವ ಕುರಿತು ನಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಅವರು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News