ವಲಸೆ ಕಾರ್ಮಿಕರ ಸಮೀಕ್ಷೆ ಸ್ಥಗಿತಕ್ಕೆ ಕೋವಿಡ್ ಎರಡನೇ ಅಲೆಯ ಕಾರಣ ನೀಡಿದ ಸರಕಾರ

Update: 2021-05-17 04:54 GMT

ಹೊಸದಿಲ್ಲಿ,ಮೇ 16: ಸಾಂಕ್ರಾಮಿಕದಿಂದಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗಳ ಕುರಿತು ಸಮೀಕ್ಷೆ ಸೇರಿದಂತೆ ಐದು ರಾಷ್ಟ್ರೀಯ ಸಮೀಕ್ಷೆಗಳನ್ನು ಸ್ಥಗಿತಗೊಳಿಸಿರುವ ಸರಕಾರವು,ಕೋವಿಡ್-19 ಎರಡನೇ ಅಲೆಯ ಕಾರಣವನ್ನು ಉಲ್ಲೇಖಿಸಿದೆ ಎಂದು telegraphindia.com ಮಾಡಿದೆ.

ಆದರೆ ವಲಸೆ ಕಾರ್ಮಿಕರಿಗೆ ಸಹಾಯವನ್ನು ವಿಳಂಬಿಸಲು ಇದೊಂದು ನೆಪವಾಗಬಾರದು ಎಂದಿರುವ ಕಾರ್ಮಿಕರ ಪ್ರತಿನಿಧಿಗಳು, ದುಡಿಯುವ ವರ್ಗದಲ್ಲಿಯ ದುರ್ಬಲ ಗುಂಪುಗಳ ಕುರಿತು ಈಗಾಗಲೇ ಬಹಳಷ್ಟು ದತ್ತಾಂಶಗಳು ಲಭ್ಯವಿವೆ ಮತ್ತು ಈ ಗುಂಪುಗಳಿಗೆ ತಕ್ಷಣ ಪರಿಹಾರದ ಅಗತ್ಯವಿದೆ ಎನ್ನುವುದನ್ನು ಇವು ಸ್ಪಷ್ಟಪಡಿಸಿವೆ ಎಂದು ಒತ್ತಿ ಹೇಳಿದ್ದಾರೆ.

ಕಾರ್ಮಿಕ ಸಚಿವಾಲಯದ ಕಾರ್ಮಿಕ ಘಟಕವು ಎಪ್ರಿಲ್ನಿಂದ ಈ ಸಮೀಕ್ಷೆಯನ್ನು ಆರಂಭಿಸಬೇಕಿತ್ತು.

ಜನರು ಸಮೀಕ್ಷಕರಿಗೆ ಸ್ಪಂದಿಸುವುದಿಲ್ಲ,ಹೀಗಾಗಿ ಸದ್ಯದ ಮಟ್ಟಿಗೆ ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ವಿರಾಮ ನೀಡಲಾಗಿದೆ. ಪರಿಸ್ಥಿತಿಯು ಸುಧಾರಿಸಿದ ಬಳಿಕ ಸಮೀಕ್ಷೆ ಕಾರ್ಯವು ಆರಂಭಗೊಳ್ಳುತ್ತದೆ ಎಂದು ಕಾರ್ಮಿಕ ಘಟಕದ ಮಹಾ ನಿರ್ದೇಶಕ ಡಿ.ಪಿ.ಎಸ್.ನೇಗಿ ತಿಳಿಸಿದರು.

ಎರಡು ಸಮೀಕ್ಷೆಗಳು ಅನುಕ್ರಮವಾಗಿ ವಲಸೆ ಕಾರ್ಮಿಕರು ಮತ್ತು ಮನೆಗೆಲಸದ ಕಾರ್ಮಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗಳ ವೌಲ್ಯಮಾಪನಕ್ಕಾಗಿದ್ದರೆ,ಇತರ ಮೂರು ಸಮೀಕ್ಷೆಗಳು ವೃತ್ತಿಪರರಿಂದ ಉದ್ಯೋಗ ಸೃಷ್ಟಿಯ ಅಧ್ಯಯನ,ಸಾರಿಗೆ ಕ್ಷೇತ್ರ ಹಾಗೂ ಎಲ್ಲ ನೋಂದಾಯಿತ ಮತ್ತು ನೋದಾಯಿತವಲ್ಲದ ಸಂಸ್ಥೆಗಳಿಗೆ ಸಂಬಂಧಿಸಿವೆ. ವಲಸೆ ಕಾರ್ಮಿಕರ ಕುರಿತ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಸಮೀಕ್ಷೆ ಎ.1ರಿಂದ ಮತ್ತು ಇತರ ಸಮೀಕ್ಷೆಗಳು ಎಪ್ರಿಲ್ ಮೂರನೇ ವಾರದಿಂದ ಹಂತಹಂತವಾಗಿ ಆರಂಭಗೊಳ್ಳಬೇಕಿತ್ತು ಮತ್ತು ಎಲ್ಲ ಸಮೀಕ್ಷೆಗಳು ಅಕ್ಟೋಬರ್ನೊಳಗೆ ಪೂರ್ಣಗೊಳ್ಳಬೇಕಿತ್ತು.

ದುಡಿಯುವ ವರ್ಗಗಳ ಸಮೀಕ್ಷೆಗಾಗಿ ಕಳೆದೊಂದು ವರ್ಷದಲ್ಲಿ ಸರಕಾರದ ಬಳಿ ಸಾಕಷ್ಟು ಸಮಯಾವಕಾಶವಿತ್ತು. ಕಳೆದ ವರ್ಷದ ಮಾ.25ರಂದು ಲಾಕ್ಡೌನ್ ಹೇರಿದಾಗ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ ಬಳಿಕ ಸರಕಾರವು ಕ್ವಾರಂಟೈನ್ ಕೇಂದ್ರಗಳಿಂದ ಸುಲಭವಾಗಿ ಮಾಹಿತಿಗಳನ್ನು ಸಂಗ್ರಹಿಸಬಹುದಿತ್ತು ಮತ್ತು ವಲಸೆ ಕಾರ್ಮಿಕರ ರಿಜಿಸ್ಟ್ರಿಯನ್ನು ಸಿದ್ಧಪಡಿಸಬಹುದಿತ್ತು ಎಂದು ಹೇಳಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧು ಅವರು,ಆದರೆ ಸರಕಾರವು ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ವಲಸೆ ಕಾರ್ಮಿಕರು ಮತ್ತು ಅಸಂಘಟಿತ ಕ್ಷೇತ್ರಗಳ ಕಾರ್ಮಿಕರಿಗಾಗಿ ಲಭ್ಯವಿರುವ ದತ್ತಾಂಶಗಳ ಆಧಾರದಲ್ಲಿ ತಕ್ಷಣವೇ ನೆರವಿಗಾಗಿ ನಾವು ಆಗ್ರಹಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News