ಉಳ್ಳಾಲ : ಕಡಲಿನಬ್ಬರದಿಂದ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

Update: 2021-05-16 13:49 GMT

ಉಳ್ಳಾಲ :  ತೌಕ್ತೇ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಪ್ರಕುಬ್ದ ಗೊಂಡಿದ್ದ ಕಡಲಿನಬ್ಬರದ ತೀವ್ರತೆ ರವಿವಾರ ಇಳಿಕೆ ಯಾಗಿದೆ. ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದ್ದು, ಪರಿಹಾರ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಕೋ, ಹಿಲರಿಯನಗರ, ಕೋಟೆ ಪುರ, ಧರ್ಮ ನಗರ ಮುಂತಾದ ಪ್ರದೇಶಗಳಲ್ಲಿ ತಡೆಗೋಡೆ ಇದ್ದರೂ ನೀರಿನ ಅಲೆ ತಡೆಗೋಡೆ ದಾಟಿ ಬಂದಿತ್ತು. ಈ ಪ್ರದೇಶದಲ್ಲಿ ಮಸೀದಿ, ಮನೆಗಳ ಗೋಡೆಗಳಿಗೆ ಸಮುದ್ರದ ಅಲೆ ಅಪ್ಪಳಿಸಿದೆ. ಅಪಾಯದಂಚಿನಲ್ಲಿರುವ ಮನೆ ಮಂದಿಯನ್ನು ನಿನ್ನೆ ತೆರವು ಗೊಳಿಸಲಾಗಿತ್ತು.

ರವಿವಾರ ಘಟನಾ ಸ್ಥಳಕ್ಕೆ ಶಾಸಕ ಖಾದರ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರ ಸಭೆ ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ನಝೀರ್, ಮುಸ್ತಫಾ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಯಾದ, ಜಲಾವೃತ ಗೊಂಡ ಮನೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಈ ವೇಳೆ ಅಧಿಕಾರಿ ಗಳಿಗೆ ಶಾಸಕ ಖಾದರ್ ಸೂಚಿಸಿದ್ದಾರೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ  ನಾಲ್ಕು ಮನೆಗಳು ಭಾಗಶಃ ಹಾನಿಯಾಗಿದೆ. ಹಿಂದೂ ರುದ್ರ ಭೂಮಿ ತಡೆಗೋಡೆ ಸಮುದ್ರ ಮಡಿಲು ಸೇರಿದ್ದು ಬಿಟ್ಟರೆ ದೊಡ್ಡ ಅನಾಹುತ ನಡೆಯಲಿಲ್ಲ. ಕುದ್ರುವಿನಲ್ಲಿ ಜಲಾವೃತ ಗೊಂಡ 50ಕ್ಕೂ ಅಧಿಕ ಮನೆಗಳಲ್ಲಿ ಅಗತ್ಯ ಸಾಮಗ್ರಿಗಳು, ದಾಖಲೆ ಪತ್ರಗಳು ನೀರು ಪಾಲಾಗಿ ಹಾನಿಯಾಗಿದೆ. ಶನಿವಾರ ತಡರಾತ್ರಿ ಸುರಿದ ಗಾಳಿ ಮಳೆಗೆ ಪೆರಂಬೈಲ್ ನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಪಿಲಾರ್ ನಲ್ಲಿ ಮರವೊಂದು ಧರೆಗುರುಳಿದ್ದು, ಅದನ್ನು ರಾತ್ರಿಯೇ ತೆರವು ಗೊಳಿಸಲಾಗಿದೆ. ತಲಪಾಡಿ ಯಲ್ಲಿ ಮನೆಯೊಂದರ ಕಾಂಪೌಂಡ್ ಜರಿದು ಬಿದ್ದಿದೆ.

ಉಚ್ಚಿಲ ಪೆಟ್ರೋಲ್ ಪಂಪ್ ಬಳಿ ನೀರು ತುಂಬಿದ್ದ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಿ ಇತ್ಯರ್ಥ ಪಡಿಸಿದ್ದಾರೆ.

ಶನಿವಾರ ದಾರುಸಲಾಂ ಮದ್ರಸದಲ್ಲಿ ಆಶ್ರಯ ಪಡೆದಿದ್ದ ಜನರು ರವಿವಾರ ಅವರವರ ಮನೆಗೆ ತೆರಳಿದ್ದಾರೆ.ತಲಪಾಡಿ ಮದ್ರಸದಲ್ಲಿ ಆಶ್ರಯ ಪಡೆದಿದ್ದ ಜನರು ಕೂಡ ರವಿವಾರ ಮನೆಗೆ ತೆರಳಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಖಾದರ್, ತಹಶೀಲ್ದಾರ್ ಗುರುಪ್ರಸಾದ್ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಉಪ ನಿರೀಕ್ಷಕ ಪ್ರದೀಪ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾನಿಯಾದ ಮನೆಗೆ ಹಾಗೂ ಅಗತ್ಯ ಸಾಮಗ್ರಿಗಳು ನಾಶವಾದ ಕುಟುಂಬಕ್ಕೆ ಪರಿಶೀಲನೆ ನಡೆಸಿದ ಬಳಿಕ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಕಡಲಿನಬ್ಬರದ ತೀವ್ರತೆ ಇಳಿಕೆ ಆಗಿದೆ. ಸೋಮೇಶ್ವರದಲ್ಲಿ ಮದ್ರಸದಲ್ಲಿ ಆಶ್ರಯ ಪಡೆದವರು ಮನೆಗೆ ತೆರಳಿದ್ದಾರೆ. ಈ ಬಾರಿ ತೌಕ್ತೇ ಚಂಡಮಾರುತದ ಪರಿಣಾಮವಾಗಿ ಹಾನಿಯಾದ ಮನೆಗೆ ಹಾಗೂ ಅಗತ್ಯ ಸಾಮಗ್ರಿಗಳು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು. 

- ಗುರುಪ್ರಸಾದ್, ತಹಶೀಲ್ದಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News