ಚಂಡಮಾರುತಕ್ಕೆ ಉಡುಪಿ ಜಿಲ್ಲೆಯಲ್ಲಿ 69.71ಕೋಟಿ ರೂ. ನಷ್ಟ: ಜಿಲ್ಲಾಡಳಿತ

Update: 2021-05-16 14:16 GMT

ಉಡುಪಿ, ಮೇ 16: ತೌಕ್ತೆ ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಒಟ್ಟು 75.04 ಮೀ.ಮೀ. ಮಳೆಯಾಗಿದೆ. ಭಾರೀ ಗಾಳಿ ಮಳೆ ಹಾಗೂ ಕಡಲ್ಕೊರೆತದಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದ್ದು, ಒಟ್ಟು 69.71ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಜಿಲ್ಲಾಡಳಿತ ವರದಿ ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳು ಹಾನಿಗೊಂಡಿದ್ದು, ಕೆಲವು ಭಾಗಗಳಲ್ಲಿ ಸಾರ್ವಜನಿಕ ರಸ್ತೆ ಮತ್ತು ಸೇತುವೆ, ಕಟ್ಟಡ, ಮೀನುಗಾರಿಕಾ ದೋಣಿಗಳಿಗೆ ಹಾನಿ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಜಿಲ್ಲಾಡಳಿತ ಹಾನಿಯ ಪ್ರಮಾಣದ ವರದಿಯನ್ನು ಪಡೆದುಕೊಂಡಿದೆ.

5271 ಮೀಟರ್ ಕಡಲ್ಕೊರೆತ

ಜಿಲ್ಲೆಯಲ್ಲಿ ಒಟ್ಟು 5271 ಮೀಟರ್ ಕಡಲ್ಕೊರೆತ ಉಂಟಾಗಿದ್ದು, ಇದರಿಂದ 59.41ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಪಡುಬಿದ್ರಿಯ ಬ್ಲೂಫ್ಲಾಗ್ ಬೀಚ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ಹಾನಿಯಾಗಿ ಸುಮಾರು 25.85ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಒಟ್ಟು 83 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 2.29ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಇದರಲ್ಲಿ ಏಳು ಮನೆಗಳು ಸಂಪೂರ್ಣ ಕುಸಿದಿದ್ದು, 76 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಒಟ್ಟು 18 ಬೋಟುಗಳಿಗೆ ಭಾಗಶಃ ಹಾನಿಯಾಗಿದ್ದು, 12 ಮೀನುಗಾರಿಕೆ ಬಲೆಗಳು ಸಂಪೂರ್ಣ ಹಾನಿ ಗೊಳಗಾಗಿವೆ. ಇದರಿಂದ ಒಟ್ಟು 9.75ಲಕ್ಷ ರೂ. ನಷ್ಟ ಉಂಟಾಗಿದೆ.

ರಾಜ್ಯ ಹೆದ್ದಾರಿ ಮತ್ತು ಎಂಡಿಆರ್‌ಎಸ್ ರಸ್ತೆಗಳಿಗೆ ಹಾನಿಯಾಗಿ ಒಟ್ಟು 2.15ಕೋಟಿ ರೂ. ನಷ್ಟ ಉಂಟಾಗಿದೆ. ಅದೇರೀತಿ ಹಾನಿಗೊಳಗಾಗಿ ರುವ ಅರ್ಬನ್ ರಸ್ತೆಯಿಂದ 1.55 ಕೋಟಿ ರೂ., ಮೀನುಗಾರಿಕಾ ರಸ್ತೆಯಿಂದ 2.20 ಕೋಟಿ ರೂ. ನಷ್ಟ ಸಂಭವಿಸಿದೆ. 8 ಸೇತುವೆಗಳಿಗೆ ಹಾನಿಯಾಗಿ ಸುಮಾರು 40ಲಕ್ಷ ರೂ. ನಷ್ಟವಾಗಿದೆ. ಒಟ್ಟು 5 ಸರಕಾರಿ ಕಟ್ಟಡ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿ 25ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮೆಸ್ಕಾಂಗೆ 21ಲಕ್ಷ ರೂ. ನಷ್ಟ

ಗಾಳಿಮಳೆಗೆ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ಕೆಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದರಿಂದ ಕೆಲವು ಗ್ರಾಮಗಳು ಕಳೆದ 24ಗಂಟೆಗಳಿಂದ ಕತ್ತಲೆಯಲ್ಲಿ ಮುಳುಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಒದಗಿಸಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ ಒಟ್ಟು 21ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 30 ಕಂಬಗಳು, ಕುಂದಾಪುರದಲ್ಲಿ 75 ಕಂಬಗಳು ಸೇರಿದಂತೆ 105 ಕಂಬಗಳು ಧರೆಗೆ ಉರುಳಿ ಬಿದ್ದಿವೆ. ಇದರಿಂದ ಒಟ್ಟು 9.5 ಲಕ್ಷ ರೂ. ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ 8 ಟ್ರಾನ್ಸ್‌ಫಾರ್ಮರ್ ಗಳು, 4.30ಕಿ.ಮೀ. ಉದ್ದದ ವಿದ್ಯುತ್ ತಂತಿಗಳಿಗೆ ಹಾನಿಯಾಗಿವೆ.

ನಿರಂತವಾದ ಗಾಳಿ ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯ ಬಿರುಸಿನಿಂದ ನಡೆದಿದೆ.

ಮಳೆ ಪ್ರಮಾಣ ಇಳಿಕೆ

ತೌಕ್ತೆ ಚಂಡಮಾರುತದ ಪರಿಣಾಮ ಇಂದು ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕಡಲ ರುದ್ರನರ್ತನ ಮುಂದುವರೆದಿದೆ. ಚಂಡಮಾರುತ ದಿಂದ ತತ್ತರಿಸಿದ ಕಡಲ ತೀರದ ಜನತೆ ಇಂದು ಕೂಡ ಅದರ ಪರಿಣಾಮ ಎದುರಿಸುತ್ತಿದ್ದಾರೆ.

ಕಳೆದ ರಾತ್ರಿಯಿಂದ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದ್ದು, ರವಿವಾರ ಬೆಳಗ್ಗೆ 11ಗಂಟೆವರೆಗೆ ನಿರಂತವಾಗಿ ಮಳೆಯಾಗಿದೆ. ಬಳಿಕ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಮಧ್ಯಾಹ್ನ ನಂತರ ಬಿಸಿಲಿನ ವಾತಾವರಣ ಕಂಡುಬಂದಿದೆ. ಆದರೆ ಸಮುದ್ರ ಮಾತ್ರ ಶಾಂತಗೊಳ್ಳದೆ ರಕ್ಕಸಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಮಲ್ಪೆ ಪಡುಕೆರೆ, ಕಟಪಾಡಿ ಮಟ್ಟು, ಪಡುಬಿದ್ರೆ, ಎರ್ಮಾಳ್, ಕೋಡಿ, ಮರ ವಂತೆಯಲ್ಲಿ ಕಡಲ್ಕೊರೆತ ಕಂಡುಬಂದಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 75.4 ಮೀ.ಮೀ. ಮಳೆಯಾಗಿದ್ದು, ಉಡುಪಿ ತಾಲೂಕಿನಲ್ಲಿ 77.0 ಮೀ.ಮೀ., ಬ್ರಹ್ಮಾವರ- 108.0, ಕಾಪು-64.0, ಬೈಂದೂರು-104.0, ಕಾರ್ಕಳ- 73.0, ಕುಂದಾಪುರ-66.0 ಮೀ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.

ಎಸ್‌ಡಿಆರ್‌ಎಫ್ ತಂಡ ಆಗಮನ

ಚಂಡಮಾರುತ ದಿಂದ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಗಾಳಿಮಳೆ, ಕಡಲ ಕೊರೆತದಿಂದ ಹಾನಿಗಳು ಸಂಭವಿಸಿದ್ದು, ಮುಂಜಾಗ್ರತಾ ಕ್ರಮ ವಾಗಿ ಸಂಬಂಧಪಟ್ಟ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಬೆಳಗಾವಿಯಿಂದ 25 ಮಂದಿಯ ಎಸ್‌ಡಿಆರ್‌ಎಫ್ ತಂಡ ಮತ್ತು ರಿಜನಲ್ ಫೈಯರ್ ಆ್ಯಂಡ್ ಎರ್ಮೆಜೆನ್ಸಿ ಟೀಮ್ ಬೆಂಗಳೂರು ಇದರ 10 ಮಂದಿಯ ತಂಡ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲೆಗೆ ಆಗಮಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಚಂಡಮಾರುತದಿಂದ ಜಿಲ್ಲೆಯಲ್ಲಿ ಒಟ್ಟು 69.71ಕೋಟಿ ರೂ. ನಷ್ಟ ಅಂದಾಜಿ ಸಲಾಗಿದೆ. ಈ ಕುರಿತು ಪರಿಶೀಲಿಸಿ ಸಂಬಂಧಿಸಿದವರಿಗೆ ತುರ್ತು ಪರಿಹಾರವನ್ನು ಮತ್ತು ಇನ್ನೂ ಕೆಲವು ಪ್ರಕರಣಗಳಿಗೆ ಪ್ರಾಥಮಿಕ ಹಂತದ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News