×
Ad

ನೆರೆ ಹಾವಳಿ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-05-16 21:44 IST

ಮಂಗಳೂರು, ಮೇ 16: ಮುಂದಿನ ಮಳೆಗಾಲದಲ್ಲಿ ಪ್ರಕೃತಿ ವಿಕೋಪ, ನೆರೆಹಾವಳಿ ಮತ್ತಿತರ ತುರ್ತುಪರಿಸ್ಥಿಯನ್ನು ಎದುರಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಗೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೆರೆ ಸಂತ್ರಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಮುನ್ನ ಅವರ ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ಸೋಂಕು ದೃಢಪಟ್ಟಲ್ಲಿ ಅಂತಹವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ವರ್ಗಾಯಿಸಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಜಿಲ್ಲೆಯ ನೆರೆ ಹಾವಳಿ ಪ್ರದೇಶಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಗುರುತಿಸದಿರುವ ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ತೊಂದರೆಯುಂಟಾಗಬಹುದು. ಹಾಗಾಗಿ ಮೆಸ್ಕಾಂ ಸಿಬ್ಬಂದಿಯು ತಕ್ಷಣ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ ಗಾಳಿ ಮಳೆಯಿಂದ ಮರಗಳು ಉರುಳಿ ನದಿಗಳಲ್ಲಿ ತೇಲಿ ಬಂದು ಅಣೆಕಟ್ಟುಗಳ ಪ್ರದೇಶ ಗಳಲ್ಲಿ ನಿಲ್ಲುವ ಸಾಧ್ಯತೆ ಇದೆ. ಇದರಿಂದ ನೀರಿನ ಸಂಗ್ರಹ ಹೆಚ್ಚಾಗಿ ನದಿ ಸಮೀಪವಿರುವ ಮನೆಗಳಿಗೆ ನುಗ್ಗುತ್ತವೆ. ಹಾಗಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಸ್ಥಳೀಯ ಗ್ರಾಪಂ, ಸಣ್ಣ ನೀರಾವರಿ ಇಲಾಖೆ ಅಥವಾ ತಾಲೂಕು ಆಡಳಿತದಿಂದ ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಹರೀಶ್ ಪೂಂಜಾ, ಡಾ.ಭರತ್ ಶೆಟ್ಟಿ ವೈ, ಪ್ರತಾಪ್ ಸಿಂಹ ನಾಯಕ್, ರಾಜೇಶ್ ನಾಯ್ಕ್, ಜಿಪಂ ಸಿಇಒ ಡಾ. ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ, ಡಿಸಿಪಿ ಹರಿರಾಂ ಶಂಕರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ 24 ಗಂಟೆಗಳಲ್ಲಿ ದ.ಕ.ಜಿಲ್ಲೆಯಲ್ಲಿ 380 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 28 ಪ್ರದೇಶಗಳಿಗೆ ಹಾನಿ ಉಂಟಾಗಿದೆ. ಮಳೆ ಹಾಗೂ ಗಾಳಿಯಿಂದಾಗಿ 84 ಕುಟುಂಬಗಳಿಗೆ ತೊಂದರೆಯಾಗಿದೆ. 14 ಮನೆಗಳು ಸಂಪೂರ್ಣ ಹಾಳಾಗಿದೆ. 108 ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಕೃಷಿಯೇತರ ಚಟುವಟಿಕೆ ಹಾಗೂ ಪ್ರಾಣಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಡಿಸಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News