ಚಂಡುಮಾರುತ: ಕಾಪು ತಾಲ್ಲೂಕಿನಲ್ಲಿ ಅಪಾರ ಹಾನಿ

Update: 2021-05-16 17:05 GMT

ಕಾಪು : ರವಿವಾರ ಚಂಡಮಾರುತ ಅಬ್ಬರ ಕಡಿಮೆಯಾಗಿದ್ದು, ಶನಿವಾರ ಚಂಡಮಾರುತ ಹಾಗೂ ಮಳೆಯಿಂದ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ.

ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ನಲ್ಲಿ ಅಲೆಗಳ ಅಬ್ಬರದಿಂದ ತೀರದಲ್ಲಿ ನಿರ್ಮಿಸಿದ್ಧ ವಾಚ್ ಟವರ್, ಹಲವಾರು ಲೈಟ್ ಕಂಬಗಳಿಗೆ ಹಾನಿಯಾಗಿವೆ. ಬೀಚ್‍ನ ಹುಲ್ಲುಹಾಸಿನ ಮೇಲೆ ಅಲೆಯಬ್ಬರಕ್ಕೆ ಮರಳು ಬಿದ್ದು ಸೌಂದರ್ಯಕ್ಕೆ ಧಕ್ಕೆಯಾಗಿದೆ. ಚಂಡಮಾರುತ ಪ್ರಭಾವದಿಂದ ಸುಮಾರು 20 ಲಕ್ಷ ರೂಪಾಯಿಯಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶನಿವಾರ ಚಂಡಮಾರುತದಿಂದ ಪಡುಬಿದ್ರಿ, ಹೆಜಮಾಡಿ, ಬಡಾ ಉಚ್ಚಿಲ, ಎರ್ಮಾಳು, ಕಾಪು ಬೀಚ್‍ನಲ್ಲಿ ಕಡಲು ಉಕ್ಕೇರಿದ್ದು, ಸಮುದ್ರ ತೀರ ಸಂಪೂರ್ಣ ಸಮುದ್ರದಿಂದ ಆವೃತವಾಗಿತ್ತು. ಇದರಿಂದ ರಸ್ತೆಯನ್ನೂ ಕೊಚ್ಚಿಕೊಂಡು ಹೋಗಿತ್ತು. ರವಿವಾರ ಸಮುದ್ರದ ಅಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

5 ಗ್ರಾಮಗಳಿಗೆ ತೊಂದರೆ: ತಾಲೂಕಿನಲ್ಲಿ ಚಂಡಮಾರುತ ಪ್ರಭಾವದಿಂದ 99.2 ಮಿ.ಮೀ ಮಳೆಯಾಗಿದ್ದು, 5 ಗ್ರಾಮಗಳಿಗೆ ತೊಂದರೆ ಯಾಗಿದೆ. 4 ಮನೆಗಳು ಹಾಗೂ ಹಟ್ಟಿಯೊಂದಕ್ಕೆ ಭಾಗಶಃ ಹಾನಿಯಾಗಿದ್ದು, 10 ತೆಂಗಿನ ಮರಗಳು ಉರುಳಿ ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ 10 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ತಾಲೂಕಿನ ಬೆಳ್ಳೆ ಗ್ರಾಮದ ದೇವಕಿ ಅವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿ 25 ಸಾವಿರ ರೂ., ಮಟ್ಟು ಗ್ರಾಮದ ವಸಂತಿ ಅವರ ಮನೆಗೆ ಮರಬಿದ್ದು 20 ಸಾವಿರ ರೂ. ಫಲಿಮಾರು ಗ್ರಾಮದ ವಿಮಲಾ ಪೂಜಾರ್ತಿ ಅವರ ದನದ ಹಟ್ಟಿ, ಇನ್ನಂಜೆ ಗ್ರಾಮದ ಜಯಂತಿ ಅವರ ಮನೆ ಭಾಗಶಃ ಹಾನಿಯಾಗಿದ್ದು, 15ಸಾವಿರ ರೂ. ಯೇಣಗುಡ್ಡೆ ಗ್ರಾಮದ ಲಲಿತಾ ಮೆಂಡನ್ ಮನೆಗೆ ಭಾಗಶಃ ಹಾನಿಯಾಗಿದ್ದು, 50ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮತ್ತು ಶಾಸಕರ ಭೇಟಿ:

ಕಾಪು ಕ್ಷೇತ್ರದ ಕರಾವಳಿ ಭಾಗಗಳಲ್ಲಿ ಚಂಡಮಾರುತ ಪರಿಣಾಮ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಉದ್ಯಾವರ ಪಡುಕೆರೆ, ಮಟ್ಟು, ಕೈಪುಂಜಾಲು, ಕಾಪು ಲೈಟ್ ಹೌಸ್ ಪ್ರದೇಶ, ಪಡುಬಿದ್ರೆ ಬೀಚ್ ಪ್ರದೇಶ, ಹೆಜಮಾಡಿ ಕಡಲತೀರಗಳಲ್ಲಿ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಿಸಲು ಶೀಘ್ರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ  ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕಾಪು ತಹಸೀಲ್ದಾರ್ ಪ್ರತಿಭಾ ಆರ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಪೊಲೀಸ್ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿದಿಗಳು ಉಪಸ್ಥಿತರಿದ್ದರು.

ಹೆಜಮಾಡಿ ಗ್ರಾಮದಲ್ಲಿ ಉಪ್ಪು ನೀರು ನುಗ್ಗಿದ ಪರಪಟ್ಟ ಮತ್ತು ನಡಿಕುದ್ರ ಪ್ರದೇಶಕ್ಕೆ ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂ. ಅಧ್ಯಕ್ಷ ಪ್ರಾಣೇಶ್ ಹೆಜಮಾಡಿಮ ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ತಾಲ್ಲೂಕು ಪಂ. ಮಾಜಿ ಸದಸ್ಯೆ ನೀತಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News