ಭಟ್ಕಳದಲ್ಲಿ ಚಂಡಮಾರುತದ ಅರ್ಭಟ : ಅಪಾರ ಹಾನಿ

Update: 2021-05-16 17:09 GMT

ಭಟ್ಕಳ : ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಚಂಡಮಾರುತದ ಪರಿಣಾಮ ಮನೆಗಳು, ಮೀನುಗಾರಿಕೆ ಬೋಟುಗಳು ಮತ್ತು ಹೆಸ್ಕಾಂಗೆ ಹೆಚ್ಚಿನ ಹಾನಿ ಸಂಭವಿಸಿದೆ.

ಶಿರಾಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮುಂದೆ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ತೆಂಗಿನಮರ ಬಿದ್ದು ಜಖಂ ಆಗಿದೆ. ಬೇಂಗ್ರೆ ಮೂಡಶಿರಾಲಿಯ ಈರಮ್ಮ ನಾರಾಯಣ ನಾಯ್ಕ ಎನ್ನುವವರಿಗೆ ಸೇರಿದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮುಂಡಳ್ಳಿಯ ಶನಿಯಾರ ನಾಯ್ಕ ಅವರ ಮನೆ ಮೇಲೆ ಮರಬಿದ್ದು ಮೇಲ್ಚಾವಣಿ ಕುಸಿದಿದೆ. ಮಾವಿನಕುರ್ವೆ ಬಂದರಿನಲ್ಲಿ ಶನಿವಾರ ಮತ್ತು ರವಿವಾರ ಬೆಳಿಗ್ಗೆಯ ಭಾರೀ ಗಾಳಿಗೆ ಲಂಗರು ಹಾಕಿದ್ದ ಬೋಟುಗಳು ಒಂದೊಕ್ಕೊಂದು ಡಿಕ್ಕಿಯಾಗಿ ಹಾನಿಗೊಂಡಿದೆ. ಸುಮಾರು 50ಕ್ಕೂ ಅಧಿಕ ಬೋಟುಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಪುರಸಭೆ, ಜಾಲಿ ಪಟ್ಟಣ ಪಂಚಾಯತ್ ಮತ್ತು ಹದಿನಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಚಂಡಮಾರುತಕ್ಕೆ ಸುಮಾರು 30 ಕ್ಕೂ ಅಧಿಕ ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬಿರುಗಾಳಿಗೆ ಅಡಕೆ, ತೆಂಗು ಸೇರಿದಂತೆ ವಿವಿಧ ಮರಗಳು ಕಿತ್ತು ಬಿದ್ದಿದೆ. ಮುರ್ಡೇಶ್ವರದಲ್ಲಿ ತೌಕ್ಟೆ ಚಂಡಮಾರುತದ ಅಬ್ಬರಕ್ಕೆ  ಪ್ರವಾಸಿ ಮತ್ತು ಮೀನುಗಾರಿಕಾ ಬೋಟುಗಳು, ಆಟಿಕೆ ಸಾಮಗ್ರಿಗಳ ಅಂಗಡಿಗೆ ಹಾನಿಯಾಗಿದೆ. ತೀರದಲ್ಲಿರುವ ಹಲವು ಗೂಡಂಗಡಿ ಗಳಿಗೂ  ನೀರು ನುಗ್ಗಿದ್ದು,  ಕಡಲತೀರದಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲು ಇರುವ ವೀಕ್ಷಣಾ ಗೋಪುರಕ್ಕೂ ಸಹ ಹಾನಿಯಾಗಿದೆ.

ರವಿವಾರ  ಬೆಳಗ್ಗೆ 10 ಗಂಟೆಯ ವರೆಗೂ ಜೋರಾಗಿ ಸುರಿದಿದ್ದ ಮಳೆ ನಂತರ ಬಿಡುವು ಪಡೆದುಕೊಂಡರೂ ಸಂಜೆ ವೇಳೆ ಮತ್ತೆ ಗಾಳಿಯೊಂದಿಗೆ ಮತ್ತೆ ಆರಂಭಗೊಂಡಿತ್ತು. ರವಿವಾರ ಬೆಳಗ್ಗೆ ವರೆಗೆ  163.8 ಮಿಮಿ ಮಳೆಯಾಗಿದೆ.

ಹೆಸ್ಕಾಂಗೆ 5.07 ಲಕ್ಷ ರೂ.ನಷ್ಟ

ಶನಿವಾರ ಮತ್ತು ರವಿವಾರದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ವಿವಿಧ ಕಡೆ 22 ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ಹಾನಿಯಾದರೆ, 4 ಟ್ರಾನ್ಸಪೊರ್ಮರ್ ಸುಟ್ಟು ಹೋಗಿದ್ದು, ಒಟ್ಟೂ 5.07 ಲಕ್ಷ ರೂ. ನಷ್ಟ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News