ಹೊಲಸು ಬೈಗಳು ಬಳಸಬೇಡಿ: ವರ್ತಕರ ಮನವಿ

Update: 2021-05-16 17:15 GMT

ಉಪ್ಪಿನಂಗಡಿ: ದಯವಿಟ್ಟು 'ಲೋಪರ್, ಏಕವಚನ' ಪದ ಬಳಸಬೇಡಿ,  ಹೊಲಸು ಪದಗಳ ಬೈಗಳು ಕೇಳುವುದಕ್ಕಿಂತ ವ್ಯಾಪಾರ ಮಾಡದಿರುವುದೇ ಉತ್ತಮ ಎಂದೆನಿಸುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ನಿಗದಿ ಸಮಯದೊಳಗೆ ಎಲ್ಲಾ ಗ್ರ್ರಾಹಕರಿಗೆ ಸೇವೆ ಸಲ್ಲಿಸಲಾಗದಿರುವುದಕ್ಕೆ ಮಾರಾಟಗಾರ ಅಪರಾಧಿಯಾಗುತ್ತಾನೆ ಎನ್ನುವುದಾದರೆ ಲಾಕ್ ಡೌನ್ ಪ್ರಕ್ರಿಯೆ ಮುಗಿಯುವ ವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೂ ಅವಕಾಶ ನೀಡಬೇಡಿ ಎಂಬ ಅಭಿಪ್ರಾಯ ಉಪ್ಪಿನಂಗಡಿ ವಲಯದ ದಿನಸಿ ವ್ಯಾಪಾರಿಗಳಿಂದ ವ್ಯಕ್ತವಾಗಿದೆ. 

ಕೊರೋನ ವಿಶ್ವವನ್ನು ಕಾಡಿದ ಸಮಸ್ಯೆ. ಅದನ್ನು ನಿವಾರಿಸಲು ಸರಕಾರ ತಂದಿರುವ ಎಲ್ಲಾ ಕಾನೂನುಗಳನ್ನು ನಾವು ಗೌರವಿಸಲೇ ಬೇಕು. ಪಾಲಿಸಲೇ ಬೇಕು. ಅಂತೆಯೇ 8 ಗಂಟೆಗೆ ಬಂದ ಗ್ರಾಹಕ ಆತನ ಚೀಟಿ ಸರತಿ ಸಾಲಿನಲ್ಲಿ  8.50 ಕ್ಕೆ ನಮ್ಮ ಕೈ ತಲುಪಿದರೆ ಆತನಿಗೆ ಅಗತ್ಯ ವಸ್ತುಗಳನ್ನು ಕೊಡದೆ ಹಿಂದಕ್ಕೆ ಕಳುಹಿಸಿವುದು ಸರಿಯೆನಿಸುವುದೇ ? ಮಾನವೀಯ ನೆಲೆಯಲ್ಲಿ ಆತನಿಗೆ ಸೇವೆ ನೀಡಲು  ಪ್ರಯತ್ನಿಸಿದಾಗ " ಹೇ ಲೋಪರ್ ಬಾಗಿಲು ಹಾಕೋ' ಎಂಬ ಪದ ಕೇಳಿಸಿಕೊಂಡರೆ ಈ ವ್ಯಾಪಾರ ನಮಗೆ ಬೇಕಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದು ವ್ಯಾಪಾರಿಯೊಬ್ಬರು ವರ್ತಕ ಸಂಘದ ಪದಾಧಿಕಾರಿಗಳಲ್ಲಿ  ನೊಂದು ನುಡಿದಿದ್ದಾರೆ.

ಉಪ್ಪಿನಂಗಡಿಯಲ್ಲಿ ಪ್ರೊಬೆಷನರಿ ನೆಲೆಯಲ್ಲಿ ಕರ್ತವ್ಯದಲ್ಲಿರುವ ಯುವ ಎಸೈಯೊಬ್ಬರು ದ.ಕ ಜಿಲ್ಲೆಯ ಜನತೆಗೆ ಹಿತವೆನಿಸದ  ಪದಗಳನ್ನೇ ಹೆಚ್ಚಾಗಿ ಬಳಸುತ್ತಿರುವ ಬಗ್ಗೆ ವರ್ತಕ ಸಮುದಾಯದಿಂದ ಬಹಳಷ್ಟು ಅಸಮಾಧಾನ- ಆಕ್ರೋಶಗಳು ಕೇಳಿ ಬರುತ್ತಿದೆ. ಬಹಳಷ್ಟು ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಈ ಅಹಿತ ನಡೆ ಅಗತ್ಯ ವಸ್ತುಗಳಿಗಾಗಿ ಬರುವ ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅಂಗಡಿ ಮಾಲಕರು ಗ್ರಾಹಕರ ವಿರುದ್ಧ ರೇಗುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಮಾಜದಲ್ಲಿ ಸಭ್ಯರು - ಅಸಭ್ಯರು ಯಾರೆನ್ನುವುದನ್ನು ಅರ್ಥೈಸಿಕೊಂಡು ಪೊಲೀಸರು ತಮ್ಮಲ್ಲಿನ ಭಾಷಾ ಪ್ರಹಾರವನ್ನು ಬಳಸುವಂತೆ ಗಮನಹರಿಸಬೇಕಾಗಿದೆ. ಇಲ್ಲವಾದರೆ ಕೊರೋನ ಭೀತಿಯ ನಡುವೆಯೂ  ಜನರಿಗೆ ಅವಶ್ಯ ವಸ್ತುಗಳ ಸೇವೆ ಒದಗಿಸುತ್ತಿರುವ ವ್ಯಾಪಾರಿಗಳು ತಮ್ಮ ಕರ್ತವ್ಯದಿಂದ ವಿಮುಖವಾದರೆ ಇನ್ನಷ್ಟು ಗೊಂದಲಗಳು ನಿರ್ಮಾಣವಾಗಲಿದೆ.

ಇಲ್ಲಿ ಕೆಲವು ಹಂಚಿನ ಛಾವಣಿಯ, ಹಳೆಯ ಕಟ್ಟಡದಲ್ಲಿರುವ ಅಂಗಡಿಗಳಿದ್ದು, ಈ ಮಧ್ಯೆ ಕಳೆದ ಕೆಲ ದಿನಗಳಿಂದ ಲಾಕ್ ಡೌನ್ ಕಾರಣಕ್ಕೆ ಬಾಗಿಲನ್ನೇ ತೆರೆಯದ  ಹಲವು ಅಂಗಡಿಗಳಲ್ಲಿನ ವಸ್ತುಗಳು ಇಲಿ  ಹೆಗ್ಗಣಗಳಂತಹ ಪ್ರಾಣಿಗಳಿಂದ ಹಾನಿಗೀಡಾಗುವ ಭೀತಿ ಇದ್ದರೆ,  ಇನ್ನೊಂದೆಡೆ ಸತತವಾಗಿ ಸುರಿಯುವ ಮಳೆಯಿಂದಾಗಿ  ನೀರು ಸೋರಿಕೆಯಾಗಿ  ವಸ್ತುಗಳ ಹಾನಿಗೀಡಾಗುವ  ಸಾಧ್ಯತೆ ಇದೆ. ಈ ಕಾರಣಕ್ಕೆ ಸಮಸ್ಯೆಯ ಸಾಧ್ಯತೆ ಇರುವ ಅಂಗಡಿಗಳ ಮಾಲಕರಿಗೆ ತಮ್ಮತಮ್ಮ  ಅಂಗಡಿಯೊಳಗಿನ ಸ್ಥಿತಿಗತಿಯನ್ನು ಪರಿಶೀಲಿಸಲು ಮತ್ತು  ಅಗತ್ಯ  ದುರಸ್ತಿ ಕಾರ್ಯವನ್ನು ಮಾಡಲು ಲಾಕ್ ಡೌನ್ ಅವಧಿಯಲ್ಲಿ ಅವಕಾಶ ನೀಡಬೇಕೆಂದು ವರ್ತಕ ಸಂಘದ ನಿಕಟಪೂರ್ವಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಪುತ್ತೂರು ಶಾಸಕ ಸಂಜೀವ ಮಟಂದೂರು ಅವರಲ್ಲಿ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News