ಭಟ್ಕಳದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಅಶೋಕ್ ಭೇಟಿ
ಭಟ್ಕಳ : ಭಟ್ಕಳದಲ್ಲಿ ತೌಕ್ತೆ ಚಂಡಮಾರುತದಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹೆರ್ತಾರ್, ಜಾಲಿಕೊಡಿ ಹಾಗೂ ಬಂದರ್ ಭಾಗಕ್ಕೆ ಭೇಟಿ ಪರಿಶೀಲಿಸಿದ ಬಳಿಕ ಮದ್ಯಮದೊಂದಿಗೆ ಮಾತನಾಡಿದ ಅವರು ತೌಕ್ತೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಆಗಿರುವ ಹಾನಿಯನ್ನು ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿಲಾಗಿದೆ. ವಿಶೇಷವಾಗಿ ಕಡಲ ಕೊರೆತದಿಂದ ಆಗಿರುವ ಮನೆ ಹಾನಿಗಳ ಬಗ್ಗೆ ಸಮೀಕ್ಷೆ ನಡೆಯಬೇಕಿದ್ದು. ಹಾನಿಯನ್ನು ನಾನು ಖುದ್ದಾಗಿ ವೀಕ್ಷಿಸಿದ್ದು, ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಹಾನಿಯಾದವರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದೇನೆ. ಉತ್ತರಕನ್ನಡ ಜಿಲ್ಲೆಯಲ್ಲಿ 48 ಗ್ರಾಮಗಳು ಬಾಧಿತವಾಗಿದ್ದು, 8 ಕಾಳಜಿ ಕೇಂದ್ರ ತೆರೆಯಲಾಗಿದ್ದು ಕಾಳಜಿ ಕೇಂದ್ರಗಳಲ್ಲಿ 107 ಜನರು ಆಶ್ರಯ ಪಡೆಯುತ್ತಿದ್ದು, ಭಟ್ಕಳದಲ್ಲಿ ಮೃತಗೊಂಡ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಚೆಕ್ ನೀಡಲಾಗುವುದು ಒಟ್ಟು 176 ಮನೆಗಳು, 86 ಮೀನುಗಾರಿಕಾ ಬೋಟ್‌ಗಳು, 45 ಬಲೆಗಳಿಗೆ ಹಾನಿಯಾಗಿದ್ದು, 3.57 ಹೆಕ್ಟೇರ್ ತೋಟಗಾರಿಕಾ ಬೆಳೆ, 530 ವಿದ್ಯುತ್ ಕಂಬಗಳು, 130 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.ಪ್ರಾಥಮಿಕವಾಗಿ ಸಮೀಕ್ಷೆ ನಡೆಸಲಾಗಿದ್ದು, 3-4 ದಿನಗಳಲ್ಲಿ ಅಧಿಕಾರಿಗಳಲ್ಲಿ ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಒದಗಿಸುತ್ತೇನೆ, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷನಾಗಿ ನಾನು ಪರಿಹಾರ ಹಣ ಬಿಡುಗಡೆ ಮಾಡ್ತೇನೆ ನೀರು ನುಗ್ಗಿದ ಮನೆಗಳಿಗೆ ಎರಡು ದಿನಗಳಲ್ಲಿ ಹತ್ತು ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದ್ದು ಅರ್ಧ ಭಾಗ ಬಿದ್ದ ಮನೆಗಳಿಗೆ 1 ಲಕ್ಷ ರೂ. ಹಾಗೂ ಪೂರ್ತಿಯಾಗಿ ಬಿದ್ದ ಮನೆಗಳಿಗೆ 5 ಲಕ್ಷ ರೂ. ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ, ಕುಮಟಾ ಶಾಸಕ ದಿನಕರ್ ಶೆಟ್ಟಿ , ಕಾರವಾರ ಶಾಸಕಿ ರೂಪಾಲಿ ನಾಯ್ಕ ಉಪಸ್ಥಿತರಿದ್ದರು.