×
Ad

ಕೊರೊನಾ ಬಾಧಿತರ ಮನೆಗೆ ಭೇಟಿ ನೀಡುವಂತೆ ವಿಲೇಜ್‌ ಟಾಸ್ಕ್‌ ಫೋರ್ಸ್‌ಗೆ ಶಾಸಕ ಸುನಿಲ್‌ ಮನವಿ

Update: 2021-05-18 22:58 IST

ಕಾರ್ಕಳ : ಕೊರೊನಾ ಸೋಂಕಿತರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯದ ಕುರಿತು ವಿಚಾರಿಸಿ, ಸೂಕ್ತ ಸಲಹೆ ನೀಡುವಂತೆ ವಿಲೇಜ್‌ ಟಾಸ್ಕ್‌ ಫೋರ್ಸ್‌ಗೆ ಶಾಸಕ ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ತಾಲೂಕು ಪಂಚಾಯತ್‌ನಲ್ಲಿ ಪಿಡಿಒಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಪಾಸಿಟಿವ್‌ ಕಂಡು ಬಂದವರ ಮನೆಗೆ ಭೇಟಿ ನೀಡಿ ಅವರಿಗೆ ಆತ್ಮಸೈರ್ಯ ನೀಡುವ ಕಾರ್ಯವಾಗಬೇಕು. ಕೆಲವೊಂದು ಮನೆಗಳಲ್ಲಿ ಹೋಂ ಐಸೋಲೇಶನ್‌ಗೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಅಂತಹ ಮನೆಯವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಶಿಫ್ಟ್‌ ಮಾಡಬೇಕು. ಒಂದೆರಡು ದಿನದಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ ಕೊರೊನಾ ಬಾಧಿತರ ಕುಟುಂಬಕ್ಕೆ ಪಲ್ಸ್‌ ಆಕ್ಸಿಮೀಟರ್‌ ನೀಡುವ ಕಾರ್ಯವಾಗಬೇಕು ಎಂದು ಶಾಸಕರು ತಿಳಿಸಿದರು. ಆಕ್ಸಿಮೀಟರ್‌ ನೀಡುವಾಗ ಅವರಿಂದ ರೇವಣಿ ಎಂಬಂತೆ 250 ರೂ. ಸಂಗ್ರಹಿಸಿ, ಆಕ್ಸಿಮೀಟರ್‌ ವಾಪಸ್‌ ಪಡೆಯುವಾಗ ಆ ಹಣ ಮರಳಿಸುವಂತೆ ಪಿಡಿಒಗಳಿಗೆ ತಿಳಿಸಿದರು.

ಚಿಕಿತ್ಸೆ ಸಂಪೂರ್ಣ ಉಚಿತ

ಆಕ್ಸಿಜನ್‌ ಸ್ಯಾಚುರೇಷನ್‌ 94 ಗಿಂತ ಕಡಿಮೆಯಾದ ತಕ್ಷಣ ಆಸ್ಪತ್ರೆಗೆ ದಾಖಲಾದಲ್ಲಿ ಸಮಸ್ಯೆಯಾಗುವುದಿಲ್ಲ. ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಆದಲ್ಲಿ ಸೋಂಕಿತರ ಬಿಲ್‌ ಸಂಪೂರ್ಣ ಉಚಿತವಾಗಿರಲಿದೆ. ಸೋಂಕಿತರು ನೇರವಾಗಿ ಖಾಸಗಿ ಆಸ್ಪತ್ರೆ ಹೋಗಿ ದಾಖಲಾದಲ್ಲಿ ಬಿಲ್‌ ಪಾವತಿ ಮಾಡಬೇಕಾಗುವುದು ಎಂದು ಶಾಸಕರು ತಿಳಿಸಿದರು. 

ಕಾರ್ಕಳದಲ್ಲಿ ಬೆಡ್‌, ಆಕ್ಸಿಜನ್‌ ಕೊರತೆಯಿಲ್ಲ 

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸಕಲ ಪ್ರಯತ್ನ ಮಾಡುತ್ತಿದೆ. ವೈದ್ಯಕೀಯ ವ್ಯವಸ್ಥೆ ಸದೃಢಗೊಳಿಸುವಲ್ಲಿ ಸರಕಾರದೊಂದಿಗೆ ಸಂಘ-ಸಂಸ್ಥೆಗಳು, ದಾನಿಗಳು ನೆರವಾಗುತ್ತಿದ್ದಾರೆ. ಸೇವಾ ಮನೋಭಾವಕ್ಕೆ ಇದೊಂದು ಜೀವಂತ ಉದಾಹರಣೆ. ಕಾರ್ಕಳದಲ್ಲಿ ಬೆಡ್‌ಗಾಗಲೀ ಅಥವಾ ಆಕ್ಸಿಜನ್‌ಗಾಗಲಿ ಕೊರತೆಯಿಲ್ಲ. ಈ ಕುರಿತು ಯಾವ ಗೊಂದಲವೂ ಬೇಡವೆಂದು ಶಾಸಕರು ಸ್ಪಷ್ಪಪಡಿಸಿದರು. ನಿವೃತ್ತಿ ಪಡೆದಿರುವ ಸರಕಾರಿ ನರ್ಸ್‌ಗಳು ಸೇವೆಗೆ ಹಾಜರಾಗುವಂತೆ ಇದೇ ಸಂದರ್ಭ ಮನವಿ ಮಾಡಿಕೊಂಡ ಶಾಸಕರು, ಸೇವೆ ಸಲ್ಲಿಸಿದಲ್ಲಿ ಅವರಿಗೆ ಗೌರವ ಧನ ನೀಡಲಾಗುವುದು ಎಂದರು. 

ಶೇ. 32 ಪಾಸಿಟಿವಿಟಿ

ನಿಟ್ಟೆ ಸಮುದಾಯ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಮಾರ್ಪಾಡಿಸಲಾಗಿದೆ. ಇದು ಜಿಲ್ಲೆಯಲ್ಲೇ ಮೊದಲು ಎಂದು ತಿಳಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಕಾರ್ಕಳದಲ್ಲಿ ಶೇ. 37ರಷ್ಟಿದ್ದ ಪಾಸಿಟಿವಿಟಿ ಇದೀಗ ಶೇ. 32ಕ್ಕೆ ಇಳಿದಿದೆ. ಕಾರ್ಕಳದಲ್ಲಿ 47, 869 ಮಂದಿಗೆ ಲಸಿಕೆ ನೀಡಲಾಗಿದೆ ಎಂದರು. ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್‌ ಪುರಂದರ್‌, ಹೆಬ್ರಿ ಇಒ ಶ್ರೀನಿವಾಸ್‌ ಬಿ.ವಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಇಒ ಶಶಿಧರ್‌ ಜಿ.ಎಸ್.‌ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News