ಮಾಡದ ಅಪರಾಧಕ್ಕಾಗಿ 31 ವರ್ಷ ಜೈಲಿನಲ್ಲಿ ಕಳೆದ ಸೋದರರಿಗೆ 613 ಕೋಟಿ ರೂ. ಪರಿಹಾರ

Update: 2021-05-18 17:37 GMT

ವಾಶಿಂಗ್ಟನ್, ಮೇ 18; ಮಾಡದ ಅಪರಾಧಕ್ಕಾಗಿ ಅಮೆರಿಕದ ನಾರ್ತ್ ಕ್ಯಾರಲೈನ ರಾಜ್ಯದ ಜೈಲೊಂದರಲ್ಲಿ 31 ವರ್ಷಗಳನ್ನು ಕಳೆದ ಇಬ್ಬರು ಆಫ್ರಿಕನ್ ಅಮೆರಿಕನ್ ಮಲ ಸಹೋದರರಿಗೆ 84 ಮಿಲಿಯ ಡಾಲರ್ (ಸುಮಾರು 613 ಕೋಟಿ ರೂಪಾಯಿ) ಪರಿಹಾರ ನೀಡಲಾಗಿದೆ ಎಂದು ಅವರ ವಕೀಲರು ಸೋಮವಾರ ತಿಳಿಸಿದ್ದಾರೆ.

ಇದು ಅಮೆರಿಕದ ಇತಿಹಾಸದಲ್ಲೇ ಮಾಡದ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದವರಿಗೆ ನ್ಯಾಯಾಲಯವೊಂದು ನೀಡುತ್ತಿರುವ ಅತಿ ದೊಡ್ಡ ಪರಿಹಾರ ಮೊತ್ತವಾಗಿದೆ ಎಂದು ವಕೀಲ ಡೆಸ್ ಹೋಗನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಬುದ್ಧಿಮಾಂದ್ಯರಾಗಿರುವ ಹೆನ್ರಿ ಲೀ ಮೆಕಲಮ್ ಮತ್ತು ಅವರ ಮಲಸಹೋದರ ಲಿಯಾನ್ ಬ್ರೌನ್ 11 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಕೊಂದಿದ್ದಾರೆ ಎಂಬುದಾಗಿ 1983ರಲ್ಲಿ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಬಂಧನದ ಸಮಯದಲ್ಲಿ ಅವರ ಪ್ರಾಯ ಕ್ರಮವಾಗಿ 19 ಮತ್ತು 15 ವರ್ಷಗಳಾಗಿದ್ದವು. ತಪ್ಪೊಪ್ಪಿಗೆ ಪತ್ರಗಳಿಗೆ ಸಹಿ ಮಾಡುವಂತೆ ತಮ್ಮನ್ನು ಬಲವಂತಪಡಿಸಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಬಾಲಕಿಯ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇನ್ನೋರ್ವ ಪುರುಷನ ಡಿಎನ್‌ಎ ಪತ್ತೆಯಾದ ಬಳಿಕ, 2014ರಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು.

ಕಳೆದ ಶುಕ್ರವಾರ ನ್ಯಾಯಾಲಯವೊಂದು, ಸಹೋದರರಿಗೆ ಪರಿಹಾರ ಮತ್ತು ಬಡ್ಡಿಯ ರೂಪದಲ್ಲಿ 84 ಮಿಲಿಯ ಡಾಲರ್ ನಿಡುವಂತೆ ಸರಕಾರಕ್ಕೆ ಆದೇಶಿಸಿದೆ.

ಹಿಂದೆ ಬಡವರು, ಬಿಳಿಯೇತರರು ಮತ್ತು ಗ್ರಾಮೀಣ ಭಾಗಗಳ ಜನರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿತ್ತು. ಈಗ ಆ ಕಾಲ ಹೋಗಿದೆ ಎಂಬ ಸಂದೇಶವನ್ನು ನ್ಯಾಯಾಲಯದ ತೀರ್ಪು ನೀಡಿದೆ ಎಂದು ಅವರ ವಕೀಲ ಹೋಗನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News