×
Ad

ಯುದ್ಧವಿರಾಮವನ್ನು ಬೆಂಬಲಿಸುವೆ: ಇಸ್ರೇಲ್ ಪ್ರಧಾನಿಯೊಂದಿಗೆ ಅಮೆರಿಕ ಅಧ್ಯಕ್ಷರ ಫೋನ್ ಸಂಭಾಷಣೆ

Update: 2021-05-18 23:35 IST

ವಾಶಿಂಗ್ಟನ್, ಮೇ 18: ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವಿನ ಭೀಕರ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಯುದ್ಧವಿರಾಮವನ್ನು ಜಾರಿಗೆ ತರುವುದಕ್ಕೆ ನನ್ನ ಬೆಂಬಲವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸೋಮವಾರ ಹೇಳಿದ್ದಾರೆ. ಆದರೆ, ಸಾರ್ವಜನಿಕವಾಗಿ ಈ ಹೇಳಿಕೆ ನೀಡುವುದರಿಂದ ಅವರು ಹಿಂದೆ ಸರಿದಿದ್ದಾರೆ.

ಇಸ್ರೇಲ್ ಪ್ರಧಾನಿಗೆ ಫೋನ್ ಕರೆ ಮಾಡಿದ ಅಧ್ಯಕ್ಷರು, ಯುದ್ಧವಿರಾಮಕ್ಕೆ ತನ್ನ ಬೆಂಬಲ ಘೋಷಿಸಿದ್ದಾರೆ ಹಾಗೂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಈಜಿಪ್ಟ್ ಮತ್ತು ಇತರ ಸಂಬಂಧಪಟ್ಟ ದೇಶಗಳೊಂದಿಗೆ ಅಮೆರಿಕ ಮಾತುಕತೆ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಇಸ್ರೇಲ್-ಫೆಲೆಸ್ತೀನ್ ನಡುವಿನ ಭೀಕರ ಸಂಘರ್ಷವನ್ನು ತಕ್ಷಣ ಕೊನೆಗೊಳಿಸಬೇಕು ಎಂಬುದಾಗಿ ಇತರ ಜಾಗತಿಕ ನಾಯಕರು ಕರೆ ನೀಡಿದ್ದರೂ, ಜೋ ಬೈಡನ್ ಆ ಬಗ್ಗೆ ಏನೂ ಮಾತನಾಡಿರಲಿಲ್ಲ. ಇದಕ್ಕಾಗಿ ಅವರು ತನ್ನದೇ ಡೆಮಾಕ್ರಟಿಕ್ ಪಕ್ಷದ ನಾಯಕರಿಂದ ಟೀಕೆಗೊಳಗಾಗಿದ್ದರು.

ವಿವೇಚನಾರಹಿತ ರಾಕೆಟ್ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗಿದೆ ಎಂಬ ತನ್ನ ಪ್ರಮುಖ ನಿಲುವನ್ನು ಇದೇ ಸಂದರ್ಭದಲ್ಲಿ ಬೈಡನ್ ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ಶ್ವೇತಭವನ ತಿಳಿಸಿದೆ. ಅಮಾಯಕ ನಾಗರಿಕರ ರಕ್ಷಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲು ಬೈಡನ್ ಇಸ್ರೇಲನ್ನು ಉತ್ತೇಜಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಗಾಝಾ ಪಟ್ಟಿಯಲ್ಲಿ ಒಂದು ವಾರದ ಹಿಂದೆ ಸ್ಫೋಟಗೊಂಡ ಸಂಘರ್ಷದಲ್ಲಿ 59 ಮಕ್ಕಳು ಸೇರಿದಂತೆ ಕನಿಷ್ಠ 200 ಮಂದಿ ಮೃತಪಟ್ಟಿದ್ದಾರೆ. 1,300ಕ್ಕೂ ಅಧಿಕ ಫೆಲೆಸ್ತೀನೀಯರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News