ಚಂಡಮಾರುತದಿಂದ ಅಪಾಯದಲ್ಲಿದ್ದ ಮನೆ ಕುಸಿತವನ್ನು ತಡೆಯುವಲ್ಲಿ ಟೀಂ ವೆಲ್ಫೇರ್ ಜಂಟಿ ಕಾರ್ಯಾಚರಣೆ
ಮಂಗಳೂರು, ಮೇ.18: ಕರಾವಳಿಯಾದ್ಯಂತ ಬೀಸಿದ ಇತ್ತೀಚಿನ ತೌಕ್ತೆ ಚಂಡಮಾರುತದ ಕಾರಣ ಬಜ್ಪೆಯ ಕರಂಬಾರು ಬಳಿಯ ರಾಜಕಾಲುವೆಯ ತಡೆಗೋಡೆ ಕುಸಿತದಿಂದಾಗಿ ಅಲ್ಲೇ ಸಮೀಪದ ಮನೆಯು ಕೂಡಾ ಕುಸಿಯುವ ಭೀತಿಯಿಂದ ಅದರಲ್ಲಿ ವಾಸವಿದ್ದ ಕುಟುಂಬವು ನಿಸ್ಸಹಾಯಕರಾಗಿರುವ ಮಾಹಿತಿಯನ್ನು ಪಡೆದ ಜಮಾಅತೆ ಇಸ್ಲಾಮಿ ಹಿಂದ್ ಇದರ ಅಂಗಸಂಸ್ಥೆ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ(ಎಚ್.ಆರ್.ಎಸ್) ಮೂಡಬಿದ್ರೆ ತಂಡದ ನಾಯಕ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಗುರುಪುರ ವಲಯ ಕಾರ್ಯದರ್ಶಿ ಮುನೀರ್ ಪದ್ರೆಂಗಿಯವರು ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ, ಕಾರ್ಯ ಪ್ರವೃತ್ತರಾಗಿ ಎಚ್.ಆರ್.ಎಸ್ ಕುಪ್ಪೆಪದವು ಮತ್ತು ಬಜ್ಪೆ ಪರಿಸರದ ಸುಮಾರು ಹದಿನೈದು ಕಾರ್ಯಕರ್ತರನ್ನು ಸೇರಿಸಿಕೊಂಡು ತಡೆಗೋಡೆ ಕುಸಿದ ಭಾಗಕ್ಕೆ ಸುಮಾರು ನಾನೂರರಷ್ಟು ಮರಳು ಚೀಲಗಳಿಂದ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಿ ಸದ್ರಿ ಕುಟುಂಬವನ್ನು ಅಪಾಯದಿಂದ ಪಾರುಗೊಳಿಸಲಾಗಿದೆಯೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವೆಲ್ಫೇರ್ ಪಕ್ಷದ ಸಮಾಜ ಸೇವಾ ಘಟಕವಾಗಿರುವ ಟೀಮ್ ವೆಲ್ಫೇರ್ ಜತೆಗೆ ಎಚ್.ಆರ್.ಎಸ್ ತಂಡ ಕೂಡಾ ಸಕ್ರಿಯವಾಗಿದ್ದ ಈ ಕಾರ್ಯಾಚಾರಣೆಯ ಸಂದರ್ಭ ಉಪಸ್ಥಿತರಿದ್ದ ಜಮಾಅತೆ ಇಸ್ಲಾಮಿ ಹಿಂದ್ ಬಜ್ಪೆ ಇದರ ಸಂಚಾಲಕರಾಗಿರುವ ಬಿ.ಎಂ. ಶರೀಫ್ ರವರು, ಹೆಚ್.ಆರ್.ಎಸ್ ತಂಡ ಮತ್ತು ಟೀಮ್ ವೆಲ್ಪೇರ್ ಜತೆಯಾಗಿ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಮಹತ್ತರ ಸೇವೆಯನ್ನು ನೀಡುತ್ತಿದೆ. ಅಲ್ಲದೆ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಪರಿಹಾರ ಕಾರ್ಯಗಳನ್ನು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ನಿರಂತರವಾಗಿ ಮಾಡುತ್ತಿದೆ. ಅದೇ ರೀತಿಯಲ್ಲಿ ಇಲ್ಲಿನ ಬಜ್ಪೆ, ಗುರುಪುರ, ತೆಂಕ ಎಡಪದವು ಮತ್ತು ಮೂಡಬಿದ್ರೆಯ ಪರಿಸರಗಳಲ್ಲಿ ಯಾವುದೇ ವಿಧದ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಸದಾ ಸನ್ನದ್ಧವಾಗಿರುವ ತಂಡವನ್ನು ನಾವು ಹೊಂದಿರುವುದಾಗಿ ಹೇಳಿದರು.