×
Ad

ಮುಂಬೈ: ಮುಳುಗಿದ ಬಾರ್ಜ್‌ನಲ್ಲಿದ್ದ 93 ಮಂದಿ ಇನ್ನೂ ನಾಪತ್ತೆ

Update: 2021-05-19 09:41 IST

ಮುಂಬೈ, ಮೇ 19: ತೌಕ್ತೆ ಚಂಡಮಾರುತ ಹೊಡೆತಕ್ಕೆ ಸಿಲುಕಿ ಮುಳುಗಿದ ಬಾರ್ಜ್ ಪಪಾ (ಪಿ-305)ದಲ್ಲಿದ್ದ 93 ಮಂದಿ ಸಿಬ್ಬಂದಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಭಾರತೀಯ ನೌಕಾಪಡೆಯ ಐದು ನೌಕೆಗಳು, ನೌಕಾ ಹೆಲಿಕಾಪ್ಟರ್ ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿ ಇವರ ಪತ್ತೆಗೆ ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಮುಂಬೈ ಕರಾವಳಿಯಿಂದ 35 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದ ಬಾರ್ಜ್‌ನಿಂದ 180 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈ ಕರಾವಳಿಯಿಂದ ಹೊರಟ ಎರಡು ಬಾರ್ಜ್‌ಗಳು ಮತ್ತು ಗುಜರಾತ್‌ನ ಪಿಪವಾವ್ ಬಂದರಿನಿಂದ ಹೊರಟಿದ್ದ ಒಂದು ಬಾರ್ಜ್ ಹಾಗೂ ಡ್ರಿಲ್ ನಾವೆಯಲ್ಲಿದ್ದ ಒಟ್ಟು 638 ಮಂದಿಯನ್ನು ರಕ್ಷಿಸಲಾಗಿದೆ ಅಥವಾ ಅವರು ಇದ್ದ ನಾವೆಗಳನ್ನು ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಪಿ-305 ಹೊರತುಪಡಿಸಿ ಇತರ ಎಲ್ಲ ಬಾರ್ಜ್‌ಗಳಿದ್ದವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿ-305 ಬಾರ್ಜ್‌ನಿಂದ 180 ಮಂದಿಯಲ್ಲದೇ, ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್‌ನಲ್ಲಿ 137 ಮಂದಿ ಇದ್ದರು. ಇವರನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಮತ್ತು ಓಎನ್‌ಜಿಸಿ ಮೂಲಗಳು ಹೇಳಿವೆ. 220 ಮಂದಿ ಇದ್ದ ಸಪೋರ್ಟ್ ಸ್ಟೇಷನ್-3 ಬಾರ್ಜನ್ನು ಟಗ್‌ಬೋಟ್ ಸುರಕ್ಷಿತವಾಗಿ ದಡ ಸೇರಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ನೌಕಾಪಡೆಯ ಐಎನ್‌ಎಸ್ ಬಿಯಾಸ್, ಬೆಟ್ವಾ ಹಾಗೂ ಟೆಗ್ ಜತೆಗೆ ಐಎನ್‌ಎಸ್ ಕೊಚ್ಚಿ ಮತ್ತು ಕೊಲ್ಕತ್ತಾ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಪಿ 81 ಮತ್ತು ನೌಕಾ ಹೆಲಿಕಾಪ್ಟರ್ ವೈಮಾನಿಕ ಶೋಧ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News