×
Ad

ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರ ರದ್ದುಪಡಿಸದಂತೆ ದ.ಕ. ಜಿಲ್ಲಾಧಿಕಾರಿಗೆ ಮನವಿ

Update: 2021-05-19 22:49 IST

ಬಂಟ್ವಾಳ: ಕೆಲವು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಈ ತಿಂಗಳಿಂದ ಪಡಿತರ ರದ್ದು ಪಡಿಸಿರುವ ಆದೇಶವನ್ನು ಹಿಂಪಡೆದು ಈ ಹಿಂದಿನಂತೆ ಎಲ್ಲರಿಗೂ ಪಡಿತರ ವಿತರಿಸುವಂತೆ ಆಗ್ರಹಿಸಿ ಪುದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಅವರು ಶಾಸಕ ಯು.ಟಿ.ಖಾದರ್ ಅವರ ನಿರ್ದೇಶನದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿರುವ ನಡುವೆಯೂ ಕೆಲವು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಸರಕಾರ ಪಡಿತರವನ್ನು ತಡೆಹಿಡಿದಿರುವ ಕ್ರಮ ಸರಿಯಲ್ಲ. ಕುಟುಂಬದ ಯಾವುದಾದರೂ ಒಬ್ಬ ಸದಸ್ಯ ಬ್ಯಾಂಕ್ ಸಾಲ ಮಾಡಿ ದ್ವಿಚಕ್ರ ವಾಹನ ಖರೀದಿಸಲು ಆದಾಯ ತೆರಿಗೆ ಪಾವತಿಸಿದ್ದನ್ನೇ ಆಧಾರವಾಗಿಟ್ಟು ಅವರ ಪಡಿತರ ಚೀಟಿಯನ್ನು ಎಪಿಎಲ್ ಗೆ ವರ್ಗಾಹಿಸುವ ಕ್ರಮ ಅವೈಜ್ಞಾನಿಕವಾಗಿದೆ. ಹಾಗಾಗಿ ಎಲ್ಲಾ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಮೊದಲಿನಂತೆ ಪಡಿತರ ವಿತರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಅಂತ್ಯೋದಯ ಅಥವಾ ಬಿಪಿಎಲ್ ಕುಟುಂಬದ ಯಾವುದಾದರೂ ಒಬ್ಬ ಸದಸ್ಯ ಕಷ್ಟಪಟ್ಟು ದುಡಿದು ದ್ವಿಚಕ್ರ ವಾಹನ ಖರೀದಿಸಲು ಬೇಕಾಗಿ ಬ್ಯಾಂಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸಿದ ಮಾತ್ರಕ್ಕೆ ಇಡೀ ಕುಟುಂಬ ಶ್ರೀಮಂತವಾಗಿದೆ ಎಂದು ಅರ್ಥವಲ್ಲ. ಸರಕಾರ ಈ ರೀತಿಯ ಯಾವುದೇ ಆದೇಶವನ್ನು ಹೊರಡಿಸುವಾಗ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಉಮರ್ ಫಾರೂಕ್ ಒತ್ತಾಯಿಸಿದ್ದಾರೆ. 

ಪುದು ಗ್ರಾಮದ ಕೆಲವು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ಈ ತಿಂಗಳ ಪಡಿತರ ಪಡೆಯಲು ನ್ಯಾಯ ಬೆಲೆಯ ಅಂಗಡಿಗೆ ತೆರಳಿದಾಗ ಅವರ ಪಡಿತರ ರದ್ದಾಗಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರದ್ದುಗೊಂಡ ಪಡಿತರ ಚೀಟಿದಾರರು ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮತ್ತು ಉಮರ್ ಫಾರೂಕ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದರು‌. ಉಮರ್ ಫಾರೂಕ್ ಮತ್ತು ರಮ್ಲಾನ್ ಮಾರಿಪಳ್ಳ ಅವರ ನೇತೃತ್ವದ ನಿಯೋಗ ಆಹಾರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಆದಾಯ ಇಲಾಖೆ ನೀಡಿದ ಆದಾಯ ತೆರಿಗೆ ಪಾವತಿಸಿದವರ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಗೆ ವರ್ಗಾಹಿಸಿರುವುದು ತಿಳಿದು ಬಂದಿತ್ತು‌‌. ಈ ವಿಷಯವನ್ನು ನಿಯೋಗ ಶಾಸಕ ಯು.ಟಿ.ಖಾದರ್ ಅವರ ಗಮನ ಸೆಳೆಯಿತು. ಯು.ಟಿ.ಖಾದರ್ ಅವರ ನಿರ್ದೇಶನದಂತೆ ಕೂಡಲೇ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಯುವ ಕಾಂಗ್ರೆಸ್ ಮುಖಂಡ ಹಿಶಾಮ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಸದಸ್ಯ ರಝಕ್  ಅಮೆಮರ್, ಫೈಝಲ್ ಅಮೆಮರ್, ಯುವ ಕಾಂಗ್ರೆಸ್ ಸದಸ್ಯ ರಿಲ್ವಾನ್ ಅಮೆಮರ್, ಝಹಿದ್ ಮಾರಿಪಳ್ಳ, ಮುಸ್ತಫಾ ಅಮೆಮರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News