ಹರೇಕಳ ಡ್ಯಾಂ ನಿರ್ಮಾಣ ಪ್ರದೇಶಕ್ಕೆ ಯು.ಟಿ.ಖಾದರ್ ಭೇಟಿ
ಕೊಣಾಜೆ: ಹರೇಕಳ ಅಡ್ಯಾರ್ ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಚಂಡಮಾರುತ ಪ್ರಭಾವದಿಂದಾಗಿ ನೀರಿನ ಮಟ್ಟ ಏರಿಕೆಯಾಗಿತ್ತು.ಆದರೆ ಶಂಬೂರು ಮತ್ತು ತುಂಬೆ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ಸಂದರ್ಭ ಹರೇಕಳ ಡ್ಯಾಂ ನಿರ್ಮಿಸುವ ಸಂಸ್ಥೆಗೆ ಮಾಹಿತಿ ನೀಡಬೇಕು. ಆದರೆ ಎಎಂಆರ್ ಹೈಡ್ರೋಲಿಕ್ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟು ಬೇಜವಾಬ್ದಾರಿ ಮೆರೆದಿದೆ. ಇದರಿಂದ ಸೇತುವೆ ಕಾಮಗಾರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಮಳೆನೀರು ಬಿಡದಿದ್ದರೆ ಮಳೆಗಾಲದಲ್ಲಿ ಸ್ಲಾಬ್ ನಿರ್ಮಿಸಿ ಜನರು ನಡೆದಾಡುವ ವ್ಯವಸ್ಥೆ ಪೂರ್ಣಗೊಳ್ಳುತ್ತಿತ್ತು. ಅದರೆ ಇದೀಗ ಕಾಮಗಾರಿಗೆ ಅಡಚನೆಯಾಗಿದೆ. ಮಳೆಗಾಲದಲ್ಲಿ ದೊಡ್ಡ ಮಟ್ಟದ ನೀರು ಬಂದಾಗ ಸ್ಥಳೀಯ ಪ್ರದೇಶದಲ್ಲಿ ನಿಲ್ಲುವುದು ಸಾಮಾನ್ಯ. ಸೇತುವೆ ಕೆಲಸ ಮುಗಿದ ಬಳಿಕ ನೀರು ನಿಲ್ಲುವುದಿಲ್ಲ. ಇಲ್ಲಿ ನಾಲ್ಕು ಮೀಟರ್ ನೀರು ನಿಲ್ಲಿಸಲು ಅವಕಾಶ ಇದ್ದರೂ ಎರಡು ಮೀಟರ್ ಮಾತ್ರ ನೀರು ನಿಲ್ಲಿಸಲಾಗುತ್ತದೆ.
ಉಳಿಯ ಸೇತುವೆ, ಕಾಲುದಾರಿ ನಿರ್ಮಾಣಕ್ಕೆ ವೈಯಕ್ತಿಕ ಅನುದಾನದ ಜೊತೆ ಮಳೆಗಾಲದ ಬಳಕೆಗಾಗಿ ಬೋಟ್ ನೀಡಲಾಗಿದೆ. ಮಳೆಗಾಲದಲ್ಲಿ ಉಳಿಯ ಹಾಗೂ ಸ್ಥಳೀಯ ಪ್ರದೇಶಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಆದರೂ ಸ್ಥಳೀಯರಿಗೆ ಸಂಶಯ ಇದ್ದರೆ ಮತ್ತೆ ಇಂಜಿನಿಯರ್ ರನ್ನು ತರಿಸಿ ಚರ್ಚೆ ನಡೆಸುತ್ತೇನೆ ಎಂದು ಖಾದರ್ ಭರವಸೆ ನೀಡಿದರು.
ಈ ಸಂದರ್ಭ ಹರೇಕಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಅಬ್ದುಲ್ ಸತ್ತಾರ್, ಅಬೂಬಕ್ಕರ್ ಸಿದ್ದೀಕ್, ರಫೀಕ್ ಆಲಡ್ಕ, ಎಂ.ಪಿ.ಮಜೀದ್, , ಇಂಜಿನಿಯರ್ ಗುರುಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.