×
Ad

ಮತಕ್ಕಾಗಿ ಬಳಸಿಕೊಂಡ ಬಿಜೆಪಿಯಿಂದ ಮೀನುಗಾರರ ನಿರ್ಲಕ್ಷ್ಯ : ಪ್ರಮೋದ್ ಮಧ್ವರಾಜ್‌

Update: 2021-05-20 15:36 IST

ಮಂಗಳೂರು, ಮೇ 20: ಬಿಜೆಪಿಯು ಚುನಾವಣೆಯ ಸಂದರ್ಭ ಮತಗಳಿಗಾಗಿ ಮತೀಯವಾಗಿ ಮೀನುಗಾರರನ್ನು ಬಳಸಿಕೊಂಡು ಅವರ ಮತಗಳನ್ನು ಪಡೆದು ಗೆದ್ದು ಅಧಿಕಾರದಲ್ಲಿದ್ದರೂ ಇದೀಗ ಕೋವಿಡ್‌ನಂತಹ ಸಂಕಷ್ಟ ಸಂದರ್ಭದಲ್ಲೂ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಮೀನುಗಾರಿಕಾ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.

ಈ ಆರೋಪ ಮಾಡಿದ ಅವರು, ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವ ಪ್ಯಾಕೇಜ್ ಅದೆಷ್ಟು ಮಂದಿಗೆ ತಲುಪಲಿದೆ ಎಂಬ ಬಗ್ಗೆ ಸಂಶಯ ಇದೆ. ಹಾಗಿದ್ದರೂ ನಾವು ನಿಮ್ಮ ಜತೆಗಿದ್ದೇವೆ ಎಂಬ ಭರವಸೆಗಾದರೂ ಮೀನುಗಾರರಿಗೆ ಪ್ಯಾಕೇಜ್ ಘೋಷಣೆಯನ್ನು ಬಿಜೆಪಿ ಮಾಡದೆ ಮೋಸ ಮಾಡಿದೆ ಎಂದು ಅವರು ಹೇಳಿದರು.

ಕರಾವಳಿ ಜಿಲ್ಲೆಗಳ ಆರ್ಥಿಕ ಶಕ್ತಿಯಾಗಿರುವ ಮೀನುಗಾರಿಕೆ ಈಗಾಗಲೇ ಕೋವಿಡ್ ಹಾಗೂ ಲಾಕ್‌ ಡೌನ್‌ನಿಂದ ಹಾಗೂ ಚಂಡಮಾರುತದಿಂದ ಸಂಕಷ್ಟದಲ್ಲಿದೆ. ಮೀನುಗಾರರು ಮಾತ್ರವಲ್ಲದೆ ಇದನ್ನು ಅವಲಂಬಿಸಿರುವ ಹಲವಾರು ಕ್ಷೇತ್ರಗಳು ನಷ್ಟದಲ್ಲಿವೆ. ಮೀನುಗಾರ ಸಮುದಾಯ ದವನಾಗಿದ್ದುಕೊಂಡು ನನ್ನ ಸುಮಾರು 40 ವರ್ಷಗಳ ವೃತ್ತಿಯ ಅವಧಿಯಲ್ಲಿ ನಾನು ಇಂತಹ ಪರಿಸ್ಥಿತಿಯನ್ನು ಕಂಡಿಲ್ಲ. ಕಳೆದ ಬಾರಿ ಲಾಕ್‌ ಡೌನ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ಮೀನುಗಾರರ ಡೀಸೆಲ್ ಸಬ್ಸಿಡಿ ಕಳೆದ ಡಿಸೆಂಬರ್‌ನಿಂದ ನೀಡಲಾಗಿಲ್ಲ. ಮೀನುಗಾರಿಕಾ ಮಹಿಳೆಯರಿಗೆ ಕಳೆದ ಲಾಕ್‌ಡೌನ್ ಸಂದರ್ಭ ಸಾಲ ಮನ್ನಾ ಘೋಷಿಸಲಾಯಿತಾದರೂ ಮತ್ತೆ ಸಾಲ ಪಡೆಯುವ ಅವಕಾಶವನ್ನೇ ಕಸಿಯ ಲಾಗಿದೆ. ಮೀನುಗಾರಿಕಾ ಸಲಕರಣೆಗಳು, ಮೀನಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಏರಿಕೆಯಿಂದ ಮೀನುಗಾರಿಕಾ ವಲಯವೇ ಕಂಗೆಟ್ಟಿದೆ. ಕೇಂದ್ರ ಸರಕಾರ ಮೀನುಗಾರಿರರಿಗೆ ನೆರವಿನ ಹೆಸರನಲ್ಲಿ ಹಲವಾರು ಯೋಜನೆ, ರಿಯಾಯಿತಿ ಘೋಷಣೆ ಮಾಡಿದೆ. ಅದರ ಫಲ ಯಾರಿಗಾ ದರೂ ಲಭಿಸಿದ್ದರೆ ನಾನು ಬೇಷರತ್ ಕ್ಷಮೆಯಾಚಿಸಲು ಕೂಡಾ ಸಿದ್ಧ ಎಂದು ಅವರು ಸವಾಲೆಸೆದರು. ಕೇಂದ್ರ ಹಾಗೂ ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತು ಮೀನುಗಾರರ ಸಾಲ ಮರುಪಾವತಿ ಆರು ತಿಂಗಳ ಅವಧಿಗೆ ಮುಂದೂಡಬೇಕು. ಬಡ್ಡಿ ಮನ್ನಾ ಮಾಡುವ ಮೂಲಕ ಸಹಕರಿಸಬೇಕು. ಮೀನುಗಾರರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಅವರನ್ನು ಮರೆಯಬೇಡಿ ಎಂದು ಅವರು ಹೇಳಿದರು.

ಅಲೆಮಾರಿ ಜನಾಂಗ, ಬೀಡಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಟೈಲರ್‌ಗಳು, ಗೇರುಬೀಜ ಕಾರ್ಖಾನೆ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗ ಪರಿಹಾರವಿಲ್ಲದೆ ತತ್ತರಿಸಿದೆ. ರಾಜ್ಯದಿಂದ 25 ಮಂದಿ ಸಂಸದರನ್ನು ಆಯ್ಕೆ ಮಾಡಲಾಗಿದ್ದರೂ ಕೇಂದ್ರದ ಸಚಿವರಿಗೆ ಸಂಕಷ್ಟದ ಸಂದರ್ಭ ನೇರವಾಗಿ ಕರೆ ಮಾಡಿ ಮಾತನಾಡುವ ಧೈರ್ಯ ಒಬ್ಬರಿಗೂ ಇಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಮೂದಲಿಸಿದರು. 

ಸರಕಾರ ಮೀನುಗಾರರಿಗೆ ಪ್ಯಾಕೇಜ್ ಘೋಷಣೆಯ ಜತೆಗೆ ಸಂಕಷ್ಟದಲ್ಲಿರುವ ಎಲ್ಲಾ ದುಡಿಯುವ ವರ್ಗಕ್ಕೆ ನೆರವು ಘೋಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದರು. ಮುಖಂಡರಾದ ಸಂತೋಷ್ ಶೆಟ್ಟಿ, ಶುಭೋದಯ, ಮಹಾಬಲ ಮಾರ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News