ಬಡವರಿಗೆ ಪಡಿತರ ಚೀಟಿ ವಿತರಿಸುವುದಕ್ಕಿಂತ ರದ್ದು ಮಾಡುವುದೇ ಸರಕಾರಕ್ಕೆ ಆಸಕ್ತಿ: ಯು.ಟಿ.ಖಾದರ್

Update: 2021-05-20 17:42 GMT

ಬಂಟ್ವಾಳ, ಮೇ 20: ಅರ್ಜಿ ಸಲ್ಲಿಸಿದ ಬಡವರಿಗೆ ಪಡಿತರ ಚೀಟಿ ವಿತರಿಸದ ರಾಜ್ಯ ಸರಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು. 

ಗುರುವಾರ ಪುದು, ತುಂಬೆ, ಮೇರಮಜಲು ಗ್ರಾಮಗಳಿಗೆ ತೆರಳಿ ಕೋವಿಡ್ ಕಾರ್ಯಪಡೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ತುಂಬೆಯಲ್ಲಿ ಪತ್ರಕರ್ತರ ಜತೆ ಮಾತನಾಡಿದರು.

ಬಡವರಿಗೆ ಪಡಿತರ ಚೀಟಿ ವಿತರಣೆಗೆ ಹಿಂದೆ ನಾವು ಮಾಡಿದ ವ್ಯವಸ್ಥೆಯನ್ನು ಮುಂದುವರಿಸುವ ಆಸಕ್ತಿ ಪ್ರಸಕ್ತ ರಾಜ್ಯ ಸರಕಾರಕ್ಕೆ ಇಲ್ಲವಾಗಿದೆ. ಸರಕಾರಕ್ಕೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವಲ್ಲಿ ಇರುವ ಆಸಕ್ತಿ ಪಡಿತರ ಚೀಟಿ ವಿತರಣೆ ಮಾಡುವುದರಲ್ಲಿ ಇಲ್ಲವಾಗಿದೆ ಎಂದು ಹೇಳಿದರು.

ಬಡವರು ಜೀವನ ನಡೆಸಲು ರಿಕ್ಷಾ, ಬೈಕ್ ಖರೀದಿಸಲು, ಮಹಿಳೆಯರು ಮನೆ ಕಟ್ಟಲು ಬ್ಯಾಂಕ್ ನಿಂದ ಸಾಲ ಪಡೆದರೆ ಅವರ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿ ಪಡಿತರ ನೀಡುವುದನ್ನೇ ತಡೆಯಲಾಗಿದೆ. ಲಾಕ್ ಡೌನ್ ನ ಈ ಸಮಯದಲ್ಲಿ ಎರಡು ತಿಂಗಳು ಎಪಿಎಲ್, ಬಿಪಿಎಲ್ ಎಂದು ನೋಡದೆ ಯಾರು ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾರೋ ಅವರಿಗೆ ಅಕ್ಕಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ತಮ್ಮಲ್ಲಿ ಕಷ್ಟ ಇದ್ದಾಗ ಮಾತ್ರ ಜನರು ನ್ಯಾಯಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾರೆ ಎಂಬ ಸತ್ಯವನ್ನು ಸರಕಾರ ಅರಿಯಬೇಕಿದೆ. ಅದು ಬಿಟ್ಟು ಬಡವರ ಪಡಿತರ ಚೀಟಿಯನ್ನೇ ರದ್ದು ಮಾಡುವ ಕೆಲಸ ನಿಲ್ಲಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಕೋವಿಡ್ ಸಂದರ್ಭ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಅದರಲ್ಲಿ ಕರಾವಳಿಯ ಆಧಾರ ಸ್ತಂಭ ಮೀನುಗಾರರನ್ನು ಕಡೆಗಣಿಸಿರುವುದು ಖಂಡಿನೀಯವಾಗಿದೆ. ಮೀನುಗಾರರಿಗೂ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕಳೆದ ಡಿಸೆಂಬರ್‌ನಿಂದ ಮೀನುಗಾರರಿಗೆ ಸರಕಾರ ಸಬ್ಸಿಡಿಯ ಡಿಸೇಲನ್ನು ಕೂಡ ನೀಡಿಲ್ಲ ಎಂದು ಹೇಳಿದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ವೇತನ ಬಾರದೇ ಇದ್ದು ಇದನ್ನು ಸರಕಾರದ ಗಮನಕ್ಕೆ ತರಲಾಗಿದೆ. ಜತೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುರುವ ಇ-ಸರ್ವೇಯ ಜವಾಬ್ದಾರಿಯನ್ನು ಮುಂದಕ್ಕೆ ಹಾಕಲು ಆಗ್ರಹಿಸಲಾಗಿದೆ ಎಂದರು.

ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಕ್ಷೇತ್ರದ ಎಲ್ಲಾ ಕಡೆ ಟಾಸ್ಕ್ ಫೋರ್ಸ್‌ ಸಭೆ ನಡೆಸಲಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯಲ್ಲಿ 50 ಬೆಡ್, ಯೆನಪೋಯ ಸಂಸ್ಥೆಯ ಅಪಾರ್ಟ್ಮೆಂಟ್‌ನಲ್ಲಿ 70 ಬೆಡ್ ಹಾಗೂ ಯುನಿವರ್ಸಿಟಿಯ ಹಾಸ್ಟೆಲ್‌ನಲ್ಲಿ 100 ಬೆಡ್‌ಗಳ ವಿಶ್ರಾಂತಿ ಕೇಂದ್ರಗಳನ್ನು ಮಾಡಲಾಗಿದೆ ಎಂದರು.

ಈ ವೇಳೆ ಬಂಟ್ವಾಳ ತಾಲೂಕು ಪಂಚಾಯತ್ ನಿಟಕಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಮಜೀದ್ ಪೇರಿಮಾರ್, ಇಮ್ತಿಯಾಜ್ ತುಂಬೆ, ಇಕ್ಬಾಲ್ ಸುಜೀರ್, ಕೃಷ್ಣ ಗಟ್ಟಿ, ಸಲಾಂ, ಮಜೀದ್, ರಶೀದ್, ಇಶಾಮ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News