×
Ad

ನಡ್ಡಾ, ಸ್ಮೃತಿ ಇರಾನಿ,ಬಿ.ಎಲ್.ಸಂತೋಷ್ ಟ್ವಿಟರ್ ಖಾತೆ ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ಮನವಿ

Update: 2021-05-20 23:30 IST
ಸ್ಮೃತಿ ಇರಾನಿ, ಸಂಬಿತ್ ಪಾತ್ರ, ನಡ್ಡಾ, ಬಿ.ಎಲ್. ಸಂತೋಷ್  PTI Photos/Twitter Photo/@blsanthosh
 

ಹೊಸದಿಲ್ಲಿ: ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಟೂಲ್ ಕಿಟ್ ವಿಷಯಕ್ಕೆ ಸಂಬಂಧಿಸಿ  ಬಿಜೆಪಿ ನಕಲಿ ದಾಖಲೆಗಳನ್ನು, ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಗುರುವಾರ ಆರೋಪಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ  ಬಿಜೆಪಿ ನಾಯಕರಾದ ಸಂಬಿತ್ ಪಾತ್ರ ಹಾಗೂ  ಬಿ.ಎಲ್. ಸಂತೋಷ್ ಅವರ ಟ್ವಿಟರ್ ಖಾತೆಗಳನ್ನು  ಶಾಶ್ವತವಾಗಿ  ಸ್ಥಗಿತಗೊಳಿಸುವಂತೆ ಕೋರಿ ಟ್ವಿಟರ್ ಮುಖ್ಯ ಕಚೇರಿಗೆ ಬರೆದ ಪತ್ರದಲ್ಲಿ ವಿನಂತಿಸಿದೆ.

ಬಿಜೆಪಿಯ  ನಾಲ್ವರು ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ರಾಜೀವ್ ಗೌಡ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ ಪತ್ರದಲ್ಲಿ ಬರೆದಿದ್ದಾರೆ.

"ಕಾಂಗ್ರೆಸ್ ಕುರಿತು  ನಕಲಿ ದಾಖಲೆಗಳನ್ನು ಹರಡುವಲ್ಲಿ ತೊಡಗಿರುವ ಬಿಜೆಪಿ ನಾಯಕರ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸುವಂತೆ ನಾವು ಟ್ವಿಟರ್ ಗೆ ಔಪಚಾರಿಕವಾಗಿ ಪತ್ರ ಬರೆದಿದ್ದೇವೆ. ಎಫ್ಐಆರ್ ಈಗಾಗಲೇ ದಾಖಲಾಗಿದ್ದರೂ, ಸ್ವತಂತ್ರ ಸತ್ಯ-ಪರಿಶೀಲನೆ ತಂಡ ಬಿಜೆಪಿಯ ಪ್ರಚಾರ ತಂತ್ರವನ್ನು  ಬಯಲಿಗೆಳೆದಿದೆ" ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕರು ಟ್ವಿಟರ್ ಅನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದು ಇದು ದೊಡ್ಡ ಪ್ರಮಾಣದ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲು ಕಾರಣವಾಗಿದೆ ಹಾಗೂ ಇದು  ದೇಶದಲ್ಲಿ ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಟ್ವಿಟರ್  ಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ತಿಳಿಸಿದೆ.

ಮಂಗಳವಾರ, ಕಾಂಗ್ರೆಸ್ ಮೇಲೆ  ಟೂಲ್ ಕಿಟ್  ಆರೋಪ ಹೊರಿಸಿದ್ದ ಬಿಜೆಪಿ, ಕೊರೋನವೈರಸ್ ನ  ಹೊಸ ಪ್ರಬೇಧವ ನ್ನು "ಇಂಡಿಯಾ ಸ್ಟ್ರೈನ್" ಅಥವಾ "ಮೋದಿ ಸ್ಟ್ರೈನ್" ಎಂದು ಕರೆಯುವ ಮೂಲಕ ಕಾಂಗ್ರೆಸ್, ದೇಶದ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಘನತೆಗೆ  ಕಳಂಕ ತರಲು  ಬಯಸಿದೆ ಎಂದು ಹೇಳಿತ್ತು.

ಬಿಜೆಪಿ 'ನಕಲಿ ಟೂಲ್ ಕಿಟ್' ಅನ್ನು ಪ್ರಚಾರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News