×
Ad

ದೇಶದಲ್ಲಿ ಬ್ಲ್ಯಾಕ್‌ ಫಂಗಸ್ ಪ್ರಕರಣ ಹೆಚ್ಚಳ: 126 ಸಾವು

Update: 2021-05-21 09:39 IST
Photo source: PTI

ಹೊಸದಿಲ್ಲಿ, ಮೇ 21: ಕೋವಿಡ್-19 ಎರಡನೇ ಅಲೆ ಅಬ್ಬರದ ನಡುವೆಯೇ ದೇಶದಲ್ಲಿ ಬ್ಲ್ಯಾಕ್‌ ಫಂಗಸ್ (ಕಪ್ಪು ಶಿಲೀಂದ್ರ) ಸಮಸ್ಯೆ ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೆ 5,500ಕ್ಕೂ ಹೆಚ್ಚು ಮಂದಿಯನ್ನು ಬಾಧಿಸಿದೆ. ಬುಧವಾರದ ವರೆಗೆ ಈ ಮಾರಕ ರೋಗಕ್ಕೆ 126 ಮಂದಿ ಬಲಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 90 ಸಾವು ಸಂಭವಿಸಿದೆ. ಈ ಮಧ್ಯೆ ಈ ರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಶಿಲೀಂದ್ರ ನಿರೋಧಕ ಔಷಧ ಆಂಪೋಟೆರಿಸಿನ್ ಬಿ ಕೊರತೆ ರಾಜ್ಯಗಳನ್ನು ಕಂಗೆಡಿಸಿವೆ. ಕೋವಿಡ್-19 ರೋಗಿಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ.

ಕಪ್ಪುಶಿಲೀಂದ್ರ ರೋಗದಿಂದ ಹದಿನಾಲ್ಕು ಮಂದಿ ಮೃತಪಟ್ಟಿರುವ ಹರ್ಯಾಣ ಮಹಾರಾಷ್ಟ್ರ ಬಳಿಕ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಎಂಟು ಮಂದಿ ರೋಗಕ್ಕೆ ಬಲಿಯಾಗಿದ್ದು, ಈ ಎಲ್ಲ ಸಾವುಗಳು ಲಕ್ನೋದಲ್ಲಿ ಸಂಭವಿಸಿವೆ. ಇತರ ರಾಜ್ಯಗಳ ಅಂಕಿ ಅಂಶಗಳು ಲಭ್ಯವಿಲ್ಲ. ಜಾರ್ಖಂಡ್‌ನಲ್ಲಿ ನಾಲ್ವರು ಮೃತಪಟ್ಟಿದ್ದರೆ, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ, ಬಿಹಾರ, ಅಸ್ಸಾಣ, ಒಡಿಶಾ ಮತ್ತು ಗೋವಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೆಲ ರಾಜ್ಯಗಳು ಇನ್ನೂ ಕಪ್ಪುಶಿಲೀಂದ್ರ ರೋಗದಿಂದಾದ ಸಾವಿನ ಅಂಕಿ ಅಂಶ ಸಂಗ್ರಹಿಸಿಲ್ಲ.
ಈ ರೋಗವನ್ನು ಸಾಂಕ್ರಾಮಿಕ ಎಂದು ರಾಜಸ್ಥಾನ ಘೋಷಿಸಿದ ಬೆನ್ನಲ್ಲೇ ಗುಜರಾತ್ ಕೂಡಾ ಈ ಘೋಷಣೆ ಮಾಡಿದೆ. ಪಂಜಾಬ್, ಹರ್ಯಾಣ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಈ ರೋಗವನ್ನು ಅಧಿಸೂಚಿತ ರೋಗ ಎಂದು ಪ್ರಕಟಿಸಿವೆ. ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ಇಂಥ ಪ್ರತಿಯೊಂದು ಪ್ರಕರಣವನ್ನೂ ರಾಜ್ಯ ಸರ್ಕಾರಕ್ಕೆ ವರದಿ ಮಾಡುವುದು ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News