ಮುಲ್ಕಿ- ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಮೂರು ಸಾವಿರ ಐಸೋಲೇಶನ್ ಕಿಟ್ ವಿತರಣೆಗೆ ಚಾಲನೆ
ಮುಲ್ಕಿ, ಮೇ 21: ಮುಲ್ಕಿ-ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂರು ಸಾವಿರ ಕೋವಿಡ್ ಐಸೋಲೇಶನ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ಶುಕ್ರವಾರ ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿತು.
ಮುಲ್ಕಿ ಹಾಗೂ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ತಲಾ 1,500 ಕೋವಿಡ್ ಐಸೋಲೇಶನ್ ಕಿಟ್ ಗಳಂತೆ 3 ಸಾವಿರ ಕಿಟ್ ವಿತರಣೆಗೆ ಮಿಥುನ್ ರೈ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮಾಜಿ ಸಚಿವ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಈ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ್ವರ, ಕೆಮ್ಮು ನೆಗಡಿ ಬಂದಲ್ಲಿ ತುರ್ತಾಗಿ ಆರೋಗ್ಯವನ್ನು ರಕ್ಷಿಸಲು ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸರಕಾರವು ಧೃಢೀಕರಿಸಿದ ಔಷಧಿಗಳು ಈ ಕಿಟ್‌ನಲ್ಲಿದೆ. ಈ ಕಿಟ್ ಅನ್ನು ಉಚಿತವಾಗಿ ಅರ್ಹ ಮನೆಗಳಿಗೆ ವಿತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ದ.ಕ. ಜಿಲ್ಲೆಯನ್ನು ಕೊರೋನ ಮುಕ್ತವನ್ನಾಗಿಸಲು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಜ್ಜಾಗಿದ್ದು, ಸರಕಾರ ಮಾಡದ ಕೆಲಸವನ್ನು ವಿಪಕ್ಷದ ಸ್ಥಾನದಲ್ಲಿ ನಿಂತು ಸಮರ್ಥವಾಗಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ದಿ.ರಾಜೀವಗಾಂಧಿ ಅವರ ಪುಣ್ಯ ತಿಥಿಯಂದು ಈ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ಮಿಥುನ್ ರೈ ನುಡಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ ಆಡಿನೇಟರ್ ಎಚ್.ವಸಂತ ಬೆರ್ನಾಡ್, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ, ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮೇರಿಲ್ ರೋಗೋ, ಮುಲ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ದಕ್ಷಿಣದ ಅಧ್ಯಕ್ಷ ಸುನೀಲ್ ಪೂಜಾರಿ, ಮಂಗಳೂರು ನಗರದ ಅಧ್ಯಕ್ಷ ರಾಕೇಶ್ ದೇವಾಡಿಗ, ಮಹಿಳಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ಹಳೆಯಂಗಡಿ ಪಂ. ಸದಸ್ಯರಾದ ಜಲಜಾ ಪಾಣಾರ್, ಸತೀಶ್ ಕೊಟ್ಯಾನ್, ಧನ್‌ರಾಜ್ ಕೊಟ್ಯಾನ್ ಅನಿಲ್ ಪೂಜಾರಿ, ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಚಂದ್ರಕುಮಾರ್, ಅತಿಕಾರಿ ಬೆಟ್ಟು ಪಂ. ಸದಸ್ಯ ದಯಾನಂದ ಕೊಟ್ಯಾನ್, ಧರ್ಮಾನಂದ ಶೆಟ್ಟಿಗಾರ್, ವಸಂತ್ ಸುವರ್ಣ ಕೆ.ಎಸ್. ರಾವ್ ನಗರ, ಮಟ್ಟು ವಿವಿಧ ಪ್ರಜಾಪ್ರತಿನಿಧಿ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಐಸೋಲೇಶನ್ ಕಿಟ್‌ನಲ್ಲೇನಿದೆ?
ಈ ಐಸೋಲೇಶನ್ ಕಿಟ್ ಮಾಸ್ಕ್, ಸ್ಯಾನಿಟೈಸರ್, ಜ್ವರ, ಕೆಮ್ಮು, ನೆಗಡಿ, ಶೀತವಾದಾಗ ತೆಗೆದುಕೊಳ್ಳಬೇಕಾದ ಔಷಧಿಗಳು, ಯಾವ ಸಂದರ್ಭದಲ್ಲಿ ಏನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯ ಕೈಪಿಡಿ, ದಿನ 24 ಗಂಟೆಯೂ ಉಚಿತ ಸೇವೆ ನೀಡುವ ನುರಿತ ವೈದ್ಯರುಗಳ ಸಂಪರ್ಕದ ಮಾಹಿತಿಯ ಜೊತೆಗೆ ತುರ್ತಾಗಿ ಆ್ಯಂಬುಲೆನ್ಸ್ ಹಾಗೂ ಆಸ್ಪತ್ರೆಗಳ ಮಾಹಿತಿದಾರರ ಸಂಪರ್ಕ ವಿವರವನ್ನು ಒಳಗೊಂಡಿದೆ.