×
Ad

ಉಡುಪಿ; ಕಾನೂನು ಬಾಹಿರ ದತ್ತು ಪ್ರಕರಣ: ದಂಪತಿ, ವೈದ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Update: 2021-05-21 16:27 IST

ಉಡುಪಿ, ಮೇ 21: ಚಿಕ್ಕಮಗಳೂರು ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದಿಂದ ಬಂದ ದೂರಿನಂತೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರ ದತ್ತು ಪ್ರಕ್ರಿಯೆ ನಡೆಸಿದ ದಂಪತಿ ಹಾಗೂ ವೈದ್ಯರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಂಗಾರಕಟ್ಟೆಯ ಫಯಾಝ್ ಹಾಗೂ ಶಾಹಿಸ್ತಾ ದಂಪತಿ ಉಡುಪಿಯ ಹುಸೈನ್ ಎಂಬಾತನ ಮೂಲಕ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಹೆರಿಗೆ ಆದ ಹೆಣ್ಣು ಮಗುವನ್ನು ಸುರೇಶ ಮತ್ತು ಸುಕನ್ಯಾ ದಂಪತಿಯಿಂದ ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದರು ಎಂದು ದೂರಲಾಗಿದೆ.

ನಂತರ ಮಗುವಿನ ಜನನ ಪ್ರಮಾಣ ಪತ್ರವನ್ನು ಕೊಪ್ಪ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ಜನನವಾದಂತೆ ಅಲ್ಲಿನ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಅವರಿಂದ ಪಡೆದುಕೊಳ್ಳಲಾಗಿತ್ತು. ಈ ಕುರಿತು ಬಂದ ದೂರಿನಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಕೋಟ ಠಾಣೆಯ ಉಪ ನಿರೀಕ್ಷಕ ಸಂತೋಷ್ ಬಿ.ಪಿ., ಸಹಾಯಕ ಉಪ ನಿರೀಕ್ಷಕಿ ಮುಕ್ತಾ ಈ ಪ್ರಕರಣವನ್ನು ಬೇಧಿಸಿದ್ದಾರೆ.

ಬಾಲನ್ಯಾಯ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಪ್ರಭಾಕರ ಆಚಾರ್ ನೀಡಿದ ದೂರಿನಂತೆ ಈ ಪೈಕಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. 1 ವರ್ಷ 2 ತಿಂಗಳಿನ ಹೆಣ್ಣು ಮಗುವನ್ನು ಕಾನೂನು ಬಾಹಿರ ದತ್ತು ಪಡೆದವರಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ನಿರ್ದೇಶನ ದಂತೆ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

‘ದತ್ತು ವಿಚಾರದಲ್ಲಿ ಮೋಸ ಹೋಗಬೇಡಿ’

ಕೋವಿಡ್‌ನಿಂದ ತಂದೆ ತಾಯಿ ಮೃತರಾಗಿ ಮಕ್ಕಳು ಅನಾಥ ಆಗಿದ್ದು, ಅಂತಹ ಮಕ್ಕಳನ್ನು ದತ್ತು ಪಡೆಯಿರಿ ಎಂದು ವಿಚಾರ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದ್ದು, ಅಂತಹ ಸಂದೇಶಕ್ಕೆ ಯಾರು ಮೋಸ ಹೋಗಬಾರದು ಎಂದು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ತಿಳಿಸಿದ್ದಾರೆ.

ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆದುಕೊಳ್ಳಬೇಕಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ ಮಣಿಪಾಲ ಅಥವಾ ಮಕ್ಕಳ ಕಲ್ಯಾಣ ಸಮಿತಿ ಉಡುಪಿ ಇಲ್ಲವೇ www.cara.nic.in ಜಾಲತಾಣವನ್ನು ಸಂಪರ್ಕಿಸಬಹುದೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News