ಕೋವಿಡ್‍ಗೆ 'ಆಯುರ್ವೇದ ಮದ್ದು' ಪಡೆಯಲು ಆಂಧ್ರದ ನೆಲ್ಲೂರು ಜಿಲ್ಲೆಯ ಗ್ರಾಮದಲ್ಲಿ ಭಾರೀ ಜನಸಂದಣಿ
ನೆಲ್ಲೂರು : ಕೋವಿಡ್-19 ಸೋಂಕು ಗುಣಪಡಿಸುತ್ತಿದೆ ಎಂದು ನಂಬಿಕೊಂಡು ಸರಕಾರದ ಅನುಮೋದನೆಯಿಲ್ಲದೇ ಇರುವ ಆರ್ಯುವೇದ ಔಷಧಿಯನ್ನು ಪಡೆಯಲು ಜನರು ಶುಕ್ರವಾರ ಆಂದ್ರ ಪ್ರದೇಶದ ನೆಲ್ಲೂರ್ ಜಿಲ್ಲೆ ಮುತ್ತುಕುರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮಕ್ಕೆ ತಂಡೋಪತಂಡವಾಗಿ ಆಗಮಿಸಿ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಬೋನಿಗಿ ಆನಂದಯ್ಯ ಎಂಬವರು ಸಿದ್ಧಪಡಿಸಿರುವ ಈ ಔಷಧಿ ವಿತರಣೆ ಕಾರ್ಯಕ್ಕೆ ಇಂದು ಸರ್ವೆಪಳ್ಳಿ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಮರುಚಾಲನೆ ನೀಡಿದ್ದಾರೆ. ಆದರೆ ಭಾರೀ ಜನಜಂಗುಳಿಯ ಹಿನ್ನೆಲೆಯಲ್ಲಿ ವಿತರಣಾ ಕಾರ್ಯಕ್ರಮ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಎರಡು ದಿನಗಳ ತನಕ ಮುಂದೂಡಲಾಗಿದೆ.
ಆರ್ಯುವೇದ ಔಷಧಿ ಇಂದು ವಿತರಣೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಜನರು ಗ್ರಾಮಕ್ಕೆ ಆಗಮಿಸಲಾರಂಭಿಸಿದ್ದರಲ್ಲದೆ ಸ್ಥಳದಲ್ಲಿ ಉದ್ದನೆಯ ಸರತಿಯೂ ಇತ್ತು.
ಗ್ರಾಮಕ್ಕೆ ತೆರಳುವ ಎಲ್ಲಾ ಮಾರ್ಗಗಳಲ್ಲಿ ವಾಹನ ದಟ್ಟಣೆಯಿತ್ತಲ್ಲದೆ ಕೋವಿಡ್ ಸೋಂಕಿತರನ್ನು ಹೊತ್ತ ಮೂರ್ನಾಲ್ಕು ಅಂಬ್ಯುಲೆನ್ಸುಗಳೂ ತಮ್ಮ ಸರದಿಗೆ ಕಾದಿದ್ದವು.
ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟರು.
ಶಾಸಕ ಈ ಔಷಧಿ ವಿತರಣಾ ಶಿಬಿರ ಉದ್ಘಾಟಿಸಿ ಹೊರಟ ನಂತರ ಸಂಘಟಕರು ಕೆಲ ಜನರಿಗೆ ಔಷಧಿ ವಿತರಿಸಿ ನಂತರ ಕಾರ್ಯಕ್ರಮ ಎರಡು ದಿನಗಳಿಗೆ ಮುಂದೂಡಿದರು. ಇದರಿಂದ ಆಕ್ರೋಶಗೊಂಡ ಜನರು ಸಂಘಟಕರ ಜತೆ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದ್ದು ನಂತರ ತಮ್ಮ ಮನೆಗಳಿಗೆ ಮರಳಿದ್ದಾರೆ.
ಬೋನಿಗಿ ಆನಂದಯ್ಯ ಅವರು ಸಿದ್ಧಪಡಿಸಿರುವ ಈ ಔಷಧಿ ಕಣ್ಣಿನ ಡ್ರಾಪ್ಸ್ ಆಗಿದೆ. ಇಂತಹ ಒಂದು ಔಷಧಿ ಸಿದ್ಧಗೊಳ್ಳುತ್ತಿದೆ ಎಂಬ ಸುದ್ದಿ ಪಡೆದ ಲೋಕಾಯುಕ್ತದ ಸೂಚನೆಯಂತೆ ಜಿಲ್ಲಾ ಕಲೆಕ್ಟರ್ ಕೆ ಎನ್ ಚಕ್ರಧರ್ ಬಾಬು ಮೇ 17ರಂದು ತ್ರಿಸದಸ್ಯ ಸಮಿತಿಯನ್ನು ತನಿಖೆಗೆ ರಚಿಸಿದ್ದರು.
ಜಿಲ್ಲಾ ಪಂಚಾಯತ್ ಅಧಿಕಾರಿ ಎಂ ಧನಲಕ್ಷ್ಮಿ, ಆರೋಗ್ಯಾಧಿಕಾರಿ ಡಾ ಎಸ್ ರಾಜ್ಯಲಕ್ಷ್ಮಿ ಹಾಗೂ ನೆಲ್ಲೂರು ಗ್ರಾಮೀಣ ಎಸ್ಪಿ ಹರಿನಾಥ್ ರೆಡ್ಡಿ ಸಹಿತ ಆಯುಷ್ ವೈದ್ಯರ ತಂಡ ಬೋನಿಗಿ ಅವರಿಂದ ಔಷಧದ ಮಾದರಿಗಳನ್ನು ಪಡೆದು ಪರಿಶೀಲಿಸಿದ್ದು ಅವರೊಬ್ಬ ಸೂಕ್ತ ಅರ್ಹತೆ ಹೊಂದಿದ ವೈದ್ಯರಲ್ಲ ಹಾಗೂ ಅವರ ಔಷಧಿ ಅನುಮೋದನೆಗೊಂಡಿಲ್ಲ ಎಂದು ತಿಳಿದು ಬಂದಿದೆ. ಈ ಔಷಧಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯ ಕೆಲ ಸಾಮಾನ್ಯ ಸಸ್ಯಗಳನ್ನು ಬಳಸಿ ಸಿದ್ಧಪಡಿಸಲಾಗಿದೆ. ಜತೆಗೆ ಅದರಲ್ಲಿರುವ ಕೆಲ ಅಂಶಗಳು ಮುಂದೆ ಕಣ್ಣುಗಳಲ್ಲಿ ಸಮಸ್ಯೆ ಉಂಟು ಮಾಡಬಹುದು ಎಂದು ಹೇಳಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಕೃಷ್ಣಪಟ್ಣಂ ಗ್ರಾಮದ ಬೀನಿಗಿ ಆನಂದಯ್ಯ ಕೃಷಿ ಕುಟುಂಬದವರಾಗಿದ್ದು ತಮ್ಮ ಗುರು ಸ್ವಾಮಿ ಗುರವಯ್ಯ ಅವರಿಂದ ಕೆಲವೊಂದು ಔಷಧಿ ತಯಾರಿ ಕಲಿತಿದ್ದಾರೆಂದು ಹೇಳಲಾಗುತ್ತಿದೆ.