ದೇಶದ್ರೋಹ ಆರೋಪ : ಆಂಧ್ರದ ಬಂಡಾಯ ಸಂಸದ ಕೃಷ್ಣಂ ರಾಜುವಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ದೇಶದ್ರೋಹ ಆರೋಪದ ಮೇಲೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ)ಯಿಂದ ಬಂಧಿಸಲ್ಪಟ್ಟ ಒಂದು ವಾರದ ನಂತರ ವೈಎಸ್ಆರ್ ಕಾಂಗ್ರೆಸ್ ನ ನರಸಪುರಂ ಕ್ಷೇತ್ರದ ಬಂಡಾಯ ಸಂಸದ ಕನುಮುರಿ ರಘುರಾಮ ಕೃಷ್ಣಂ ರಾಜು ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮ್ಮ ಪಕ್ಷದ ಸಂಸ್ಥಾಪಕ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯ ವನ್ನು ಕೋರಿದ ವಾರಗಳ ನಂತರ ಮೇ 14 ರಂದು ಕೃಷ್ಣಂ ರಾಜು ಅವರನ್ನು ಸಿಐಡಿ ಬಂಧಿಸಿತ್ತು.
59 ವರ್ಷದ ಕೃಷ್ಣಂ ರಾಜು ಅವರನ್ನು ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್, "ನಮ್ಮ ದೃಷ್ಟಿಯಲ್ಲಿ, ಆರ್ಮಿ ಆಸ್ಪತ್ರೆಯು ವರದಿ ಮಾಡಿರುವ ಗಾಯಗಳನ್ನು ಪರಿಗಣಿಸಿ, ಅರ್ಜಿದಾರರು ಬಂಧನದಲ್ಲಿದ್ದಾಗ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆಯಿದೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಹೇಳಿತು.
ಆಂಧ್ರ ಸಿಐಡಿ ತನ್ನ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಿ ಸಂಸದರು ಅರ್ಜಿಯನ್ನು ಸಲ್ಲಿಸಿದ ನಂತರ ನ್ಯಾಯಾಲಯ ಅವರ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತ್ತು.
ರಾಜ್ಯ ಸರಕಾರದ ಪ್ರತಿಷ್ಠೆಗೆ ಹಾನಿಕಾರಕ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಕೃಷ್ಣಂ ರಾಜು ಅವರನ್ನು ಹೈದರಾಬಾದ್ ನ ಅವರ ನಿವಾಸದಿಂದ ಬಂಧಿಸಲಾಗಿತ್ತು.