ಎನ್‌ಆರ್‌ಐಗಳಿಗಾಗಿ ಕೋವಿಡ್ ಸಮನ್ವಯ ಹೆಲ್ಪ್‌ಲೈನ್ : ಪೊಲೀಸ್ ಕಮಿಷನರ್ ಶಶಿಕುಮಾರ್‌ರಿಂದ ವೆಬಿನಾರ್
ಮಂಗಳೂರು, ಮೇ 21: ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗದ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನೆರವು ನೀಡುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ‘ಸಮನ್ವಯ’ ಹೆಲ್ಪ್‌ಲೈನ್‌ಗೆ ಇಂದು ಚಾಲನೆ ನೀಡಲಾಯಿತು.
ವಿದೇಶದಲ್ಲಿರುವ ಎನ್‌ಆರ್‌ಐಗಳ (ಅನಿವಾಸಿ ಭಾರತೀಯರು)ಜತೆ ಇಂದು ಅವರ ಸಮಸ್ಯೆಗಳ ಕುರಿತಂತೆ ‘ಸಮನ್ವಯ’ ಎಂಬ ವೆಬಿನಾರ್ ಮೂಲಕ ಸಂವಾದ ನಡೆಸಿದ ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸಹಾಯವಾಣಿ 9480802300ಗೆ ಚಾಲನೆ ನೀಡಿದರು.
ಕುವೈತ್, ಕೆನಡಾ, ಯುಎಸ್‌ಎ, ಯುಎಇ, ಕತರ್, ಒಮನ್, ಸೌದಿ ಅರೆಬಿಯಾ, ನ್ಯೂಝಿಲೆಂಡ್, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್, ಬಹರೈನ್, ಹಾಂಕಾಂಗ್, ಜಮರ್ನಿ ಸೇರಿದಂತೆ 20 ರಾಷ್ಟ್ರಗಳಿಂದ 100ಕ್ಕೂ ಅಧಿಕ ಮಂದಿ ವೆಬಿನಾರ್‌ನಲ್ಲಿ ಪಾಲ್ಗೊಂಡರು. ಮಂಗಳೂರು ಮತ್ತು ಸುತ್ತಮುತ್ತಲಿನ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಸೇವೆ, ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ.
ಆಹಾರ ವಿತರಣೆ, ಆಶ್ರಯ ತಾಣಗಳಿಗೆ ಆಹಾರ, ರಕ್ತ ಮತ್ತು ಪ್ಲಾಸ್ಮಾ ಸಂಬಂಧಿಸಿದ ವ್ಯವಸ್ಥೆ, ಉಚಿತ ಆ್ಯಂಬುಲೆನ್ಸ್, ಆಸ್ಪತ್ರೆಗಳಲ್ಲಿ ಟೆಲಿ ಮೆಡಿಸಿನ್, ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳನ್ನು ಒದಗಿಸುವುದು. ಕೋವಿಡ್ ಸೇರಿದಂತೆ ಇತರ ಸಾಮಾನ್ಯ ಸಂದರ್ಭಗಳಲ್ಲಿ ಮೃತರಾದವರ ಅಂತ್ಯ ಸಂಸ್ಕಾರ ಹಲವು ಸಂಘ ಸಂಸ್ಥೆಗಳ ಮೂಲಕ ನಡೆಯುತ್ತಿದ್ದು, ಇವುಗಳು ಸಮನ್ವಯ ಎಂಬ ಒಂದೇ ವೇದಿದಕೆಯಡಿ ತರಲಾಗಿದೆ. ಇವುಗಳ ಮೂಲಕ ಎನ್‌ಆರ್‌ಐಗಳ ಕುಟುಂಬಸ್ಥರಿಗೂ ತುರ್ತು ಸೇವೆಗಳನ್ನು ಒದಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕಂಟ್ರೋಲ್ ರೂಂ, 112 ನೆರವುಸಾರ್ವಜನಿಕು ಸ್ಥಳೀಯವಾಗಿ ಕೊರೊನಾಗೆ ಸಂಬಂಧಿಸಿ ಸಮಸ್ಯೆಗಳಿದ್ದರೆ ಪೊಲೀಸ್ ಕಂಟ್ರೋಲ್ ರೂಮ್ (9480802321)ಗೆ ಕರೆ ಮಾಡಬಹುದು. ಲಾಕ್‌ಡೌನ್ ನಿಯಮ ಉಲ್ಲಂಘನೆ, ಔಷಧ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಂಚನೆ, ಬ್ಲಾಕ್‌ಮೇಲ್ ಮೊದಲಾದ ಘಟನೆಗಳ ಬಗ್ಗೆ 112 ಸಹಾಯವಾಣಿಗೂ ಕರೆ ಮಾಡಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.
ವಿದೇಶದಲ್ಲಿರುವ ಮಂಗಳೂರು ಮೂಲದವರು, ಅವರ ಸಂಪರ್ಕ, ನೆರವಿಗಾಗಿ ಈ ಸಮನ್ವಯ ವೇದಿಕೆಯನ್ನು ಆರಂಭಿಸಲಾಗಿದೆ. ಈ ಹೆಲ್ಪ್‌ಲೈನ್‌ಗೆ ಬರುವ ಕರೆಗಳಿಗೆ ಸ್ವಯಂ ಪ್ರೇರಿತವಾಗಿ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಸ್ಪಂದಿಸಲು ಸಾಧ್ಯವಾಗದೆ ಇರುವ ಸಮಸ್ಯೆಯನ್ನು ಜಿಲ್ಲಾಡಳಿತ ಅಥವಾ ಇಲಾಖೆಗಳು, ನೋಡಲ್ ಅಧಿಕಾರಿಗಳು, ಟಾಸ್ಕ್‌ಫೋರ್ಸ್‌ಗಳ ಗಮನಕ್ಕೆ ತರುವ ಮೂಲಕ ನಾವು ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ನೆರವು ಒದಗಿಸಲಾಗುವುದು. ಅನಿವಾಸಿ ಭಾರತೀಯರು ಯಾವುದೇ ಸಹಾಯ, ನೆರವಿನ ನಿರೀಕ್ಷೆಗಾಗಿ, ಸಂದೇಶ, ಅಥವಾ ವಾಯ್ಸ್ ರೆಕಾರ್ಡ್, ವೀಡಿಯೋ ಸಂದೇಶ ಕಳುಹಿಸಿದಾಗ, ಸಂಬಂಧ ಪಟ್ಟವರಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು.
ಈ ಹೆಲ್ಪ್‌ಲೈನ್ 24x7 ಕಾರ್ಯ ನಿರ್ವಹಿಸಲಿದೆ. ಕೊರೋನ ನಾನಾ ರೀತಿಯ ತಲ್ಲಣಗಳನ್ನು ಸಷ್ಟಿಸಿದೆ. ಜನಸ್ನೇಹಿ ನಡೆಯ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಕೋವಿಡ್ ಸಮನ್ವಯ ಹೆಲ್ಪ್‌ಲೈನ್ ನಂ. -9480802300. - ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಮಂಗಳೂರು ಪೊಲೀಸರು ಸಲಹೆ ಕೇಳಿ ಸಹಾಯಕ್ಕೆ ಮುಂದಾಗಿರುವುದಕ್ಕೆ ಎನ್‌ಆರ್‌ಐಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.‘ವಿದೇಶದಲ್ಲಿ ಸಿಲುಕಿರುವ ನಮ್ಮಂತಹ ಅನೇಕ ಮಂದಿಯ ಕುಟುಂಬಸ್ಥರು ಊರಿನಲ್ಲಿ ಗೊಂದಲದಲ್ಲಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಪೊಲೀಸ್ ಆಯುಕ್ತರು ಸಲಹೆ ಕೇಳಿ ನೆರವಿಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ’ ಎಂದು ಭಾರತೀಯ ಪ್ರವಾಸಿ ಪರಿಷತ್ ಕುವೈತ್ ಕರ್ನಾಟಕ ಘಟಕದ ರಾಜ್ ಭಂಡಾರಿ ತಿರುಮಲೆಗುತ್ತು ಅವರು ಪ್ರತಿಕ್ರಿಯಿಸಿದ್ದಾರೆ.
ದ.ಕ ಜಿಲ್ಲೆಯಿಂದ ಉದ್ಯೋಗ ಅರಸಿ ದೂರದ ದೇಶಗಳಿಗೆ ತೆರಳಿ ಅಲ್ಲಿ ನೆಲೆಸಿರುವ ಅನಿವಾಸಿಗಳ ಕುಟುಂಬದವರ ಆರೋಗ್ಯದ ಬಗ್ಗೆ, ಅವರಿಗೆ ತುರ್ತು ನೆರವು ನೀಡುವ ಬಗ್ಗೆ ಪೊಲೀಸ್ ಆಯುಕ್ತರು ಸಂವಾದದಲ್ಲಿ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಹಿದಾಯತ್ ಅಡ್ಡೂರ್ ಅವರು ಹೇಳಿದ್ದಾರೆ.