ಕೃಷಿ ಪರಿಹಾರ ಘೋಷಣೆ ಮಲ್ಲಿಗೆ ಕೃಷಿಕರಿಗೆ ನಿಷ್ಪ್ರಯೋಜಕ: ಉಡುಪಿ ಜಿಲ್ಲಾ ಕೃಷಿಕ ಸಂಘ ಹೇಳಿಕೆ
ಉಡುಪಿ, ಮೇ 21: ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಕ್ಟೇರಿಗೆ 10 ಸಾವಿರ ರೂ.ಗಳ ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಸರಕಾರ ಘೋಷಿಸಿರುವ ಈ ಪರಿಹಾರ ಕರಾವಳಿ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಕುಟುಂಬಗಳು ತೊಡಗಿಸಿಕೊಂಡಿರುವ ಮಲ್ಲಿಗೆ ಹೂವಿನ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಕಾಣು ತ್ತಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಟೀಕಿಸಿದೆ.
ಜಿಲ್ಲೆಯ ಅಧಿಕ ಮಲ್ಲಿಗೆ ಬೆಳೆಗಾರರು ತುಂಡು ಭೂಹಿಡುವಳಿದಾರರು. ತೀರಾ ಅಲ್ಪ ಪ್ರಮಾಣದ - ಒಂದು ಸೆಂಟ್ಸ್‌ನಿಂದ 5 ಸೆಂಟ್ಸ್- ಜಮೀನಿ ನಲ್ಲಿ 10ರಿಂದ 50ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ವಾರ್ಷಿಕವಾಗಿ ಮಲ್ಲಿಗೆ ಗಿಡ ಒಂದರ ನಿರ್ವಹಣೆ/ಉತ್ಪಾದನಾ ವೆಚ್ಚ ಒಂದು ಸಾವಿರ ರೂ.ಗಳಷ್ಟು ಇರುತ್ತದೆ. ಇಷ್ಟು ಖರ್ಚಿನ ಬೆಳೆ ಬೇರೆ ಯಾವುದೂ ಇಲ್ಲ. ಆದರೂ ದಿನ ನಿತ್ಯದ ಬೆಳೆಯಾಗಿ, ಹೂವಿಗೆ ಪ್ರತಿದಿನವೂ ಬೇಡಿಕೆ ಇರುವುದರಿಂದ ಜಿಲ್ಲೆಯಲ್ಲಿ ಈ 40 ಸಾವಿರ ಕುಟುಂಬಗಳು ಮಲ್ಲಿಗೆ ಕೃಷಿಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿವೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಮಲ್ಲಿಗೆ ಬೆಳೆಯಲ್ಲಿ ಕೆಲವೊಮ್ಮೆ ಇಳುವರಿ ಇದ್ದಾಗ ಬೇಡಿಕೆ ಇರುವುದಿಲ್ಲ, ಬೇಡಿಕೆ ಇರುವಾಗ ಇಳುವರಿ ಇರುವುದಿಲ್ಲ. ಆದರೂ ವರ್ಷದಲ್ಲಿ ಮಾರ್ಚ್ ನಿಂದ ಮೇ ತಿಂಗಳುಗಳವರೆಗೆ ಮಲ್ಲಿಗೆ ಹೂವಿಗೆ ಅತ್ಯಧಿಕ ಬೇಡಿಕೆ ಇರುತ್ತವೆ. ಇವು ಮಲ್ಲಿಗೆ ಹೂವಿನ ಲಾಭದ ತಿಂಗಳುಗಳು. ಇದೇ ಕಾಲಘಟ್ಟದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲಾಕ್‌ಡೌನ್ ಆದ ಕಾರಣ ಮಲ್ಲಿಗೆ ಕೃಷಿ ಅಧಿಕ ಇಳುವರಿ ಇದ್ದರೂ ಬೇಡಿಕೆಯಿಲ್ಲದೆ ಆದಾಯವೂ ಇಲ್ಲದೆ ಕೃಷಿಕರು ಸಂಪೂರ್ಣವಾಗಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕೃಷಿಕ ಸಂಘ ತಿಳಿಸಿದೆ.
ಪ್ರಸ್ತುತ ಸರಕಾರ ಘೋಷಿಸಿರುವ ಪರಿಹಾರ ಮೊತ್ತವನ್ನು ಜಿಲ್ಲೆಯ ಮಲ್ಲಿಗೆ ಕೃಷಿಭೂಮಿಗೆ ಅನ್ವಯಿಸಿದರೆ, ಒಂದು ಸೆಂಟ್ಸ್‌ನಿಂದ 5 ಸೆಂಟ್ಸ್ ಜಮೀನಿನಲ್ಲಿ ಮಲ್ಲಿಗೆ ಬೆಳೆಯುತ್ತಿರುವ ಕೃಷಿಕರಿಗೆ ಸಿಗುವ ಪರಿಹಾರ 40ರೂ.ನಿಂದ 200ರೂ. ಮಾತ್ರ! ಒಂದು ಎಕ್ರೆ ಜಮೀನಿನಲ್ಲಿ ಗರಿಷ್ಠ 1200 ಗಿಡಗಳನ್ನು ನೆಡಲು ಬರುತ್ತದೆ. ಅಂದರೆ ಗಿಡ ಒಂದಕ್ಕೆ ರೂ.3 ಪರಿಹಾರ ಸಿಕ್ಕಿದಂತಾಗುತ್ತದೆ! ಇದು ಕೆಲವರಿಗೆ ಪರಿಹಾರ ಸಂಬಂಧಿತ ದಾಖಲೆ ಪತ್ರಗಳನ್ನು ಒದಗಿಸಲು ಖರ್ಚು ಮಾಡಿದ ವೆಚ್ಚದಷ್ಟೂ ಆಗಿರುವುದಿಲ್ಲ.
ಆದ್ದರಿಂದ ಸರಕಾರ ಕರಾವಳಿಯ ಈ 40 ಸಾವಿರ ಕುಟುಂಬಗಳ ಮಲ್ಲಿಗೆ ಬೆಳೆಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತೀ ಗಿಡಕ್ಕೆ ಕನಿಷ್ಠ 200ರೂ.ನಂತೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸ್ಥಳೀಯ ಜನಪ್ರತಿ ನಿಧಿಗಳನ್ನು ಜಿಲ್ಲಾ ಕೃಷಿಕ ಸಂಘವು ಒತ್ತಾಯಿಸಿದೆ.